ಮೈಸೂರು: ಮಾಜಿ ಸಿಎಂ ಮತ್ತು ವಿಪಕ್ಷ ಸಿದ್ದರಾಮಯ್ಯ (Former CM Siddaramaiah) ಯಾರ ವಿರುದ್ಧ ಸೋತಿದ್ದರೋ ಅವರನ್ನೇ ಕಾಂಗ್ರೆಸ್ ಗೆ ಸೇರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಮಾಜಿ ಸಚಿವ, ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡರ(GT Devegowda)ನ್ನ ಕಾಂಗ್ರೆಸ್ ಗೆ ಸೇರಿಸಿಕೊಳ್ಳಲು ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದಾರೆ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ (V Srinivas Prasad) ಹೇಳಿದರು. ಸಿದ್ದರಾಮಯ್ಯರನ್ನು ರಾಷ್ಟ್ರ ರಾಜಕಾರಣಕ್ಕೆ ಬನ್ನಿ ಎಂದು ಯಾರೂ ಹೇಳಿಲ್ಲ. ಇದೆಲ್ಲಾ ಊಹಾಪೋಹ. ಕಾಂಗ್ರೆಸ್ ದೇಶಾದ್ಯಂತ ನೆಲಕಚ್ಚಿದ್ದು, ಸಿದ್ದರಾಮಯ್ಯ ಅಲ್ಲಿಗೆ ಹೋಗಿ ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಇವತ್ತಿನ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕೊರಗಿದ್ದರು. ನಿನ್ನೆ ಮೊನ್ನೆ ಬಂದವರು ಕಾಂಗ್ರೆಸ್ ನಲ್ಲಿ ಸಿಎಂ ಆದರೂ ಅಂತಾ ಖರ್ಗೆ ಕೊರಗಿದ್ದು ನಾನು ನೋಡಿದ್ದೇನೆ ಎಂದು ಹೇಳಿದರು.
ಸಿದ್ದರಾಮಯ್ಯ ಹೊಸ ಪಕ್ಷ ಕಟ್ಟಲಿ
ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ತುಂಬಾ ಹತಾಶರಾಗಿದ್ದು, ಉದ್ವೇಗದಿಂದ ಏನೇನೊ ಮಾತನಾಡುತ್ತಿದ್ದಾರೆ. ಇತ್ತೀಚಿನವರೆಗೂ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿದ್ದು, ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂದು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳುತ್ತಿದ್ದಾರೆ.
ವಿರೋಧ ಪಕ್ಷದವರಾಗಿ ಜವಾಬ್ದಾರಿಯುತವಾಗಿ ಮಾತನಾಡಬೇಕು. ತಾಕತ್ತಿದ್ರೆ ಸಿದ್ದರಾಮಯ್ಯ ಹೊಸ ಪಕ್ಷ ಕಟ್ಟಲಿ ನೋಡೋಣ. ನೀವು ಎಂದಾದರೂ ಪಕ್ಷೇತರವಾಗಿ ನಿಂತು ಗೆದ್ದಿದ್ದೀರಾ. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದವ್ರಿಗೆ ಭಾಷೆ ಮೇಲೆ ಹಿಡಿತವೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.