ಲಕ್ನೋ (ಅ. 25): ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ತಮ್ಮ ಕ್ಷೇತ್ರ ವಾರಣಾಸಿಯಲ್ಲಿ ಪ್ರಧಾನ ಮಂತ್ರಿ ಆತ್ಮನಿರ್ಭರ್ ಸ್ವಸ್ತ್ ಭಾರತ್ ಯೋಜನೆಗೆ (PMASBY) ಚಾಲನೆ ನೀಡಿದರು. ಇದೇ ವೇಳೆ 9 ವೈದ್ಯಕೀಯ ಕಾಲೇಜು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಶೀಘ್ರದಲ್ಲೇ ಭಾರತ ವೈದ್ಯಕೀಯ ಕೇಂದ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ವೇಳೆ ಪಿಎಂಎಎಸ್‌ಬಿವೈ ಯೋಜನೆ ಕುರಿತು ಮಾತನಾಡಿದ ಅವರು, ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸಲು ಭಾರತದ ಅತಿದೊಡ್ಡ ಯೋಜನೆ ಇದಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯವನ್ನು ಸಾಮರ್ಥ್ಯ ಹೆಚ್ಚಿಸಲಿದೆ ಎಂದರು
ಪ್ರಧಾನಮಂತ್ರಿ ಆತ್ಮನಿರ್ಭರ್ ಸ್ವಸ್ತ ಭಾರತ್ ಯೋಜನೆ (PMASBY) ದೇಶಾದ್ಯಂತ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವ ಅತಿದೊಡ್ಡ ಪ್ಯಾನ್-ಇಂಡಿಯಾ ಯೋಜನೆ ಇದಾಗಿದೆ.
ಯೋಜನೆಯ ಗುರಿ
ಪಿಎಂಎಎಸ್‌ಬಿವೈ ನ ಉದ್ದೇಶ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯಗಳಲ್ಲಿ ನಿರ್ಣಾಯಕ ಅಂತರವನ್ನು ತುಂಬುವುದು, ವಿಶೇಷವಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಿರ್ಣಾಯಕ ಆರೈಕೆ ಸೌಲಭ್ಯಗಳು ಮತ್ತು ಪ್ರಾಥಮಿಕ ಆರೈಕೆ ಸ್ಥಾಪಿಸುವುದು. ಇದು 10ಕ್ಕೂ ಹೆಚ್ಚಿನ ರಾಜ್ಯಗಳಲ್ಲಿ ಈ ಯೋಜನೆ ಕೇಂದ್ರೀಕರಿಸಲಾಗಿದೆ. ಈ ಮೂಲಕ 17,788 ಗ್ರಾಮೀಣ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಬೆಂಬಲವನ್ನು ಒದಗಿಸಲಿದೆ. ಇದರ ಜೊತೆಗೆ, ಎಲ್ಲಾ ರಾಜ್ಯಗಳಲ್ಲಿ 11,024 ನಗರ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
ದೇಶದಲ್ಲಿ 5 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಎಲ್ಲಾ ಜಿಲ್ಲೆಗಳಲ್ಲಿ ತುರ್ತು ಚಿಕಿತ್ಸಾ ಸೇವೆಗಳು ನೀಡಲು ವಿಶೇಷ ಕ್ರಿಟಿಕಲ್ ಕೇರ್ ಆಸ್ಪತ್ರೆ ಬ್ಲಾಕ್‌ಗಳು ಈ ಯೋಜನೆಯಲ್ಲಿ ಲಭ್ಯವಿರಲಿದೆ. ಉಳಿದ ಜಿಲ್ಲೆಗಳನ್ನು ರೆಫರಲ್ ಸೇವೆಗಳ ಮೂಲಕ ರೋಗಿಗಳು ಸೇವೆಗೆ ಒಳಗೊಳ್ಳಬಹುದು