ರಾಜ್ಯಸುದ್ದಿ

ವಿಕೇಂಡ್​ ಟ್ರಿಪ್​ ಪ್ಲಾನ್​ ಮಾಡುತ್ತಿದ್ರೆ ಬೆಂಗಳೂರಿನ ಸುತ್ತಮುತ್ತ ಇರೋ ಈ ಜಾಗಕ್ಕೆ ಹೋಗಿ..!

ಪ್ರವಾಸಗಳು ಬಹಳ ಮುಖ್ಯ, ಅದರಲ್ಲೂ ವಿಶೇಷವಾಗಿ ಸದಾ ಲ್ಯಾಪ್‍ಟಾಪ್ ಮುಂದೆ ಅಥವಾ ಕಚೇರಿ ಕೆಲಸಗಳಲ್ಲಿ ವ್ಯಸ್ಥರಾಗಿರುವಂತಹ ನಗರ ವಾಸಿಗಳಿಗೆ ಪ್ರವಾಸದ (trip) ಅಗತ್ಯವಿದೆ. ನೀವು ಭಾರತದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bangalore) ವಾಸ ಮಾಡುತ್ತಿದ್ದರೆ, ನಿಮಗೆ ಪ್ರವಾಸ ಹೋಗಲು ಹಲವಾರು ಆಯ್ಕೆಗಳು ಲಭ್ಯ ಇವೆ. ಬೆಂಗಳೂರಿಗೆ 100 ಕಿ ಮೀ ಅಂತರದಲ್ಲಿ, ವಾರಾಂತ್ಯದಲ್ಲಿ ಭೇಟಿ ನೀಡಿ, ಪ್ರವಾಸದ ಸಂತೋಷ ಪಡೆಯುವಂತಹ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ಅಂತಹ ಆರು ಸ್ಥಳಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

1.   ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ (bannerghatta national park) ಬೆಂಗಳೂರು ನಗರದಿಂದ 35 ಕಿಮೀ ದೂರದಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಕರ್ನಾಟದಲ್ಲಿ ನೋಡಲೇಬೇಕಾಂದತಹ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು. ಸುಮಾರು 25,000 ಎಕರೆ ಪ್ರದೇಶದಲ್ಲಿ ಸ್ಥಿತವಾಗಿರುವ ಈ ಉದ್ಯಾನವನ ಪ್ರಕೃತಿ ಪ್ರಿಯರು ಮತ್ತು ವನ್ಯಜೀವಿ ಪ್ರೇಮಿಗಳ ಪ್ರವಾಸಕ್ಕೆ ಅತ್ಯಂತ ಸೂಕ್ತವಾದ ಸ್ಥಳ. ಇಲ್ಲಿ ಪ್ರಾಣಿ ಸಂಗ್ರಹಾಲಯವಿದೆ, ಅಕ್ವೇರಿಯಂ ಇದೆ, ಮಕ್ಕಳಿಗೆ ಪಾರ್ಕ್  ಮತ್ತು ವಸ್ತು ಸಂಗ್ರಹಾಲಯವಿದೆ. ಇಲ್ಲಿರುವ ಚಿಟ್ಟೆ ಉದ್ಯಾನವನ ಮತ್ತು ಸ್ನೇಕ್‌ ಉದ್ಯಾನವನ ಅತ್ಯಂತ ಆಕರ್ಷಕವಾಗಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಜಂಗಲ್ ಸಫಾರಿಯ ಆಯ್ಕೆಯೂ ಇದೆ ಮತ್ತು ಸಫಾರಿಗೆ ಹೋದಾಗ ಪ್ರವಾಸಿಗರಿಗೆ ಹುಲಿ ಅಥವಾ ಸಿಂಹ ನೋಡಲು ಸಿಕ್ಕಿದರಂತೂ ಅದು ಅದೃಷ್ಟವೇ ಸರಿ.

2.    ಸಾವನದುರ್ಗ ಬೆಟ್ಟ ( Savandurga Hill) ಸಾವನದುರ್ಗ ಬೆಂಗಳೂರಿನಿಂದ ಪಶ್ಚಿಮಕ್ಕೆ 60 ಕಿ.ಮೀ ದೂರದಲ್ಲಿರುವ ಸುಂದರವಾದ ಬೆಟ್ಟ. ಈ ಬೆಟ್ಟವು ಏಷ್ಯಾದ ಅತೀ ದೊಡ್ಡ ಏಕಶಿಲೆಯ ಬೆಟ್ಟಗಳಲ್ಲಿ ಒಂದಾಗಿದೆ. ಇದು ಸಮುದ್ರ ಮಟ್ಟದಿಂದ 1226 ಮೀ ಎತ್ತರದಲ್ಲಿದ್ದು, ಡೆಕ್ಕನ್ ಪ್ರಸ್ಥಭೂಮಿಯ ಒಂದು ಭಾಗವಾಗಿದೆ. ವಾರಾಂತ್ಯ ಪ್ರವಾಸ ಹೋಗುವವರಿಗೆ ಮತ್ತು ಸಾಹಸ ಪ್ರಿಯರಿಗೆ, ಟ್ರೆಕ್ಕಿಂಗ್, ಹಗ್ಗ ಸಂಚಾರ ಮತ್ತು ಗುಹೆ ವೀಕ್ಷಣೆಯಂತಹ ಚಟುವಟಿಕೆಗಳನ್ನು ಕೈಗೊಳ್ಳಲು ಹೇಳಿ ಮಾಡಿಸಿದಂತಹ ಪ್ರವಾಸಿ ಧಾಮವಿದು.

3.    ರಾಮನಗರ (Ramanagar) ಬೆಂಗಳೂರಿನಿಂದ 50 ಕಿ.ಮೀ ದೂರದಲ್ಲಿರುವ ರಾಮನಗರ ವಾರಾಂತ್ಯದಲ್ಲಿ ಭೇಟಿ ನೀಡಲು ಅತ್ಯಂತ ಉತ್ತಮವಾದ ಪ್ರೇಕ್ಷಣೀಯ ಸ್ಥಳ. ಈ ಗುಡ್ಡಗಾಡು ಪ್ರದೇಶ ಪರ್ವತಾರೋಹಿ ಮತ್ತು ಚಾರಣಿಗರಿಗೆ ಅಚ್ಚುಮೆಚ್ಚು. ಬಾಲಿವುಡ್‍ನ ಬ್ಲಾಕ್‍ಬಸ್ಟರ್ ಸಿನಿಮಾ ಶೋಲೆಯ ಚಿತ್ರೀಕರಣ ನಡೆದದ್ದು ಇಲ್ಲಿಯೇ. ಶೋಲೆ ಚಿತ್ರೀಕರಣ ನಡೆದ ಜಾಗ, ರಾಮನಗರ ರೇಶ್ಮೆ ಗೂಡು ಮಾರುಕಟ್ಟೆ, ರಾಮದೇವರ ಬೆಟ್ಟ ಮತ್ತು ಜಾನಪದ ಲೋಕ ಪ್ರವಾಸಿಗರು ಭೇಟಿ ನೀಡಲೇಬೇಕಾದ ಪ್ರಮುಖ ಸ್ಥಳಗಳು.

4.    ನಂದಿ ಬೆಟ್ಟ (Nandhi Hills)
ಬೆಂಗಳೂರಿನಿಂದ 46 ಕಿ.ಮೀ ದೂರದಲ್ಲಿದೆ. ಇದು ಅತ್ಯುತ್ತಮ ವಾರಾಂತ್ಯ ಪ್ರವಾಸದ ಸ್ಥಳಗಳಲ್ಲಿ ಒಂದು. ನಂದಿದುರ್ಗ ಎಂದು ಕೂಡ ಕರೆಯಲ್ಪಡುವ ಈ ಬೆಟ್ಟದ ಬುಡದಲ್ಲಿ ಅತ್ಯಂತ ಪ್ರಸಿದ್ಧ ಶಿವ ದೇವಾಲಯವಿದೆ. ಈ ದೇವಾಲಯದಲ್ಲಿರುವ ನಂದಿ ವಿಗ್ರಹ ಹೆಸರು ವಾಸಿಯಾಗಿದೆ. ಇದು 1000 ಸಾವಿರ ವರ್ಷಕ್ಕೂ ಹಳೆಯದಾದ ಶಿವನ ಪರ್ವತ ಎಂದು ನಂಬಲಾಗಿದೆ.

5.    ಸ್ಕಂದಗಿರಿ (Skandagiri Hills) ಬೆಂಗಳೂರಿನಿಂದ ವಾರಂತ್ಯ ಪ್ರವಾಸ ಕೈಗೊಳ್ಳಬಹುದಾದ ಮತ್ತೊಂದು ಪ್ರೇಕ್ಷಣೀಯ ಸ್ಥಳವೆಂದರೆ ಸ್ಕಂದಗಿರಿ. ಈ ಜಾಗ ಬೆಂಗೂರಿನಿಂದ 62 ಕಿ ಮೀ ದೂರದಲ್ಲಿದ್ದು, ನಿಸರ್ಗ ಸೌಂದರ್ಯ ಮತ್ತು ಚಾರಣ ಅವಕಾಶಗಳಿಗಾಗಿ ಹೆಸರುವಾಸಿಯಾಗಿದೆ. ಇಲ್ಲಿ ರಾತ್ರಿ ಕ್ಯಾಂಪಿಂಗ್‍ನ ಖುಷಿಯನ್ನು ಕೂಡ ಅನುಭವಿಸಬಹುದು.

6.    ಅಂತರಗಂಗೆ (Antara Gange )ಬೆಂಗಳೂರಿನಿಂದ 70 ಕಿ ಮೀ ದೂರದಲ್ಲಿರುವ ಅಂತರ ಗಂಗೆಯು ಕೋಲಾರ ಜಿಲ್ಲೆಯ ಶತಶೃಂಗ ಪರ್ವತ  ಶ್ರೇಣಿಯಲ್ಲಿರುವ ಸುಂದರವಾದ ಪರ್ವತ. ಅಂತರ ಗಂಗೆ ಎಂದರೆ ಆಳದಲ್ಲಿರುವ ಗಂಗೆ. ಸುಂದರ ಸೂರ್ಯೋದಯ, ಕ್ಯಾಂಪಿಂಗ್, ಪಕ್ಷಿವೀಕ್ಷಣೆ, ಗುಹಾ ವಿಹಾರ ಸೇರಿದಂತೆ ಹಲವು ಮುದ ನೀಡುವಂತಹ ಪ್ರವಾಸಿ ಆಕರ್ಷಣೆಗಳು ಇಲ್ಲಿವೆ.

Related Articles

Leave a Reply

Your email address will not be published. Required fields are marked *

Back to top button