ಹಾವೇರಿ: ಈ ಉಪಚುನಾವಣೆ ಅನಿವಾರ್ಯವಾಗಿ ಬಂದಿದೆ. ತಮ್ಮ ಮುಂದಿರೋ ಆಯ್ಕೆ ನಿರಂತರವಾಗಿ ನಿಮ್ಮೊಂದಿಗಿದ್ದು ನಿರಂತರ ಜನಸೇವೆ ಮಾಡಿದವರು ಆಗಿರಬೇಕು. ಯಾವಾಗ್ಯಾವಾಗ ನೀವು ಕಾಂಗ್ರೆಸ್ ಗೆ ಅಧಿಕಾರ ಕೊಟ್ಟಿದ್ರಿ ಆಗ ಅವರಿಂದ ಅಭಿವೃದ್ಧಿ ಆಗಿಲ್ಲ. ಅವರಿಗೆ ಮತ ಕೊಡ್ತೀರಾ ಅಥವಾ ಅಭಿವೃದ್ಧಿಗೆ ಮತ ಕೊಡ್ತೀರಾ.? ಸಿದ್ದರಾಮಯ್ಯ (Siddaramaiah) ಸಿಎಂ ಆಗಿದ್ದಾಗ ಹಾನಗಲ್ ಕ್ಷೇತ್ರಕ್ಕೆ ಯಾವುದಾದ್ರೂ ಯೋಜನೆ ಕೊಟ್ಟಿದ್ದಾರಾ.? ನಿಮ್ಮತ್ತ ತಿರುಗಿಯೂ ನೋಡಲಿಲ್ಲ.
ತಿಳುವಳ್ಳಿ ಏತ ನೀರಾವರಿ ಯೋಜನೆಗೆ ನಮ್ಮ ನಾಯಕರಾದ ಯಡಿಯೂರಪ್ಪರ ಕಾಲದಲ್ಲಿ ಜಾರಿಗೆ ತಂದ್ವಿ. ಈ ಕ್ಷೇತ್ರಕ್ಕೆ ಒಂದು ಶಾಲೆಯನ್ನೂ ಕೊಡ್ಲಿಲ್ಲ ಎಂದು ಕಾಂಗ್ರೆಸ್ ವಿರುದ್ಧಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ಹರಿಹಾಯ್ದರು.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮಕರವಳ್ಳಿ ಗ್ರಾಮದಲ್ಲಿ ಮಾತನಾಡಿದ ಬೊಮ್ಮಾಯಿ, ದಿವಂಗತ ಸಿ.ಎಂ.ಉದಾಸಿ ಕಾಲದಲ್ಲಿ ಬಿಡುಗಡೆಯಾದ ಯೋಜನೆಗೆ ಅಡಿಗಲ್ಲು ಹಾಕಲು ಬಂದಿದ್ದರು. ನಿಮಗೆ ಚಿನ್ನದ ತಟ್ಟೆಯಲ್ಲಿ ಊಟ ಕೊಡ್ತೀವಿ ಅಂತಾ ಬರ್ತಾರೆ. ಅವರು ಮಾಡಿದ್ದು ಧರ್ಮ ಧರ್ಮ ಒಡೆಯೋ ಕೆಲಸ. ಈಡಿ ಸಮಾಜದಲ್ಲಿ ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತಿ ಮನುಷ್ಯ ಮನುಷ್ಯರ ನಡುವೆ ಗೋಡೆ ಕಟ್ಟಿ ವಿಶ್ವಾಸ ಹಾಳು ಮಾಡೋ ಕೆಲಸ ಮಾಡಿದರು ಎಂದು ಆರೋಪಿಸಿದರು.