ಸಿಲಿಕಾನ್ ಸಿಟಿ ಬೆಂಗಳೂರು(Bangalore)ನಿಮಿಷ ನಿಮಿಷಕ್ಕೂ ಬೆಳೆಯುತ್ತಿದೆ. ರಾಜಧಾನಿ ನಿವಾಸಿಗಳಿಗೆ ಸೌಲಭ್ಯಗಳ ಜೊತೆ ಅಪಾಯವೂ ಕಾದಿದೆ. ಬೆಂಗಳೂರಿನಂತ ಸದಾ ಗಿಜುಗುಡುವ ನಗರದಲ್ಲೂ ಮನೆ ಬಳಿ ಪಾರಿವಾಳಗಳು (pigeons) ಬರುತ್ತಿವೆಯೇ? ಹಕ್ಕಿಗಳನ್ನು ನೋಡಿ ನೋಡಿ ನಿಮಗೆ ಖುಷಿಯಾಗಿದ್ದರೆ, ಒಂದು ನಿಮಿಷ ನಿಂತು ನೀವೀಗ ಯೋಚಿಸಬೇಕು. ಏಕೆಂದರೆ ಬೆಂಗಳೂರಿಗರ ಮನೆ ಮುಂದೆ, ಗೇಟಿನ ಮೇಲೆ, ಬಾಲ್ಕನಿಯಲ್ಲಿ ಪಾರಿವಾಳ ಬಂದು ಕೂತಿದೆ ಎಂದರೆ ಅಪಾಯ ಕಟ್ಟಿಟ್ಟ ಬುತ್ತಿ.
ಹೌದು ಪಾರಿವಾಳ ಬಂದಿದೆ ಎಂದರೆ ಸದ್ಯದಲ್ಲೇ ನಿಮ್ಮ ಮನೆಗೆ ಕನ್ನ ಬೀಳೋದು ಗ್ಯಾರಂಟಿ. ಅದಕ್ಕೆ ಕಾರಣ ಖತರ್ನಾಕ್ ಕಳ್ಳ ಬ್ಯಾಡ್ ನಾಗ. ಐಷಾರಾಮಿ ಮನೆಗಳಲ್ಲಿ ಕಳ್ಳತನ ಮಾಡಲು ಪಾರಿವಾಳವೇ ಇವನ ರಹದಾರಿ.
ಹಣದ ಆಸೆಗೆ ಬಿದ್ದ ಬ್ಯಾಡ್ ನಾಗ ಐಷಾರಾಮಿ ಡುಪ್ಲೆಕ್ಸ್ ಮನೆಗಳನ್ನು ಲಿಸ್ಟ್ ಮಾಡುತ್ತಿದ್ದ. ನಂತರ ತಾನು ಸಾಕಿ ಪಳಗಿಸಿದ ಪಾರಿವಾಳವನ್ನು ಕಳ್ಳತನ ಮಾಡಲು ಬಯಸುವ ಮನೆಗೆ ಕಳುಹಿಸುತ್ತಿದ್ದ. ಆ ಪರಿವಾಳ ಮನೆಯ ಬಾಲ್ಕನಿಯಲ್ಲಿ ಹೋಗಿ ಕೂರುತ್ತಿತ್ತು.