ವಿಜಯಪುರ: ರಾಜ್ಯದ 2 ಕ್ಷೇತ್ರಗಳ ಉಪಚುನಾವಣೆ ದಿನಾಂಕ ಘೋಷಣೆಯಾಗಿದೆ. ಹಾವೇರಿಯ ಹಾನಗಲ್ (Hanagal) ಹಾಗೂ ಸಿಂದಗಿ ಕ್ಷೇತ್ರಗಳ (Sindagi) ಉಪ ಚುನಾವಣೆಯ ದಿನಾಂಕ ಘೋಷಣೆ ಮಾಡಲಾಗಿದೆ. ಅಕ್ಟೋಬರ್ 30ರಂದು ಈ ಎರಡು ಕ್ಷೇತ್ರಗಳಿಗೆ ನಡೆಯಲಿದೆ. ನವೆಂಬರ್ 2ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಬಿಜೆಪಿ ಶಾಸಕ ಸಿ.ಎಂ.ಉದಾಸಿ ನಿಧನದಿಂದಾಗಿ ಹಾವೇರಿಯ ಹಾನಗಲ್ ಕ್ಷೇತ್ರ ತೆರವಾಗಿತ್ತು. ಇತ್ತ ಜೆಡಿಎಸ್ ಶಾಸಕ ಎಂ. ಸಿ. ಮನಗೂಳಿ (M C Managooli) ನಿಧನದಿಂದಾಗಿ ವಿಜಯನಗರದ ಸಿಂದಗಿ ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ಇದೀಗ ಮೂರು ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರಕ್ಕೆ ಇಳಿದಿದ್ದು, ಗೆಲುವಿಗಾಗಿ ನಾನಾ ಕಸರತ್ತು ನಡೆಸುತ್ತಿದ್ದಾರೆ.
ಇಂದು ಸಹ ಮೂರು ಪಕ್ಷಗಳ ಪ್ರಮುಖ ನಾಯಕರು ಸಿಂದಗಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ಸಿಂದಿಗಿಯಲ್ಲಿ ಬೀಡುಬಿಟ್ಟಿದ್ದು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಂದಿನಿಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಹ ಉಪಚುನಾವಣಾ ಅಖಾಡಕ್ಕೆ ಧುಮುಕಲಿದ್ದಾರೆ. ಯಾವ ಪಕ್ಷದಿಂದ ಯಾರೆಲ್ಲಾ ಇಂದು ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಎರಡು ದಿನ ಬಿಎಸ್ವೈ ಪ್ರಚಾರ
ಇಂದು ಸಿಂದಗಿ ಚುನಾವಣಾ ಕಣಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಧುಮುಕಲಿದ್ದಾರೆ. ಎರಡು ದಿನ ಸಿಂದಗಿಯಲ್ಲಿ ವಾಸ್ತವ್ಯ ಹೂಡಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ. ಇಂದು ಬೆಳಿಗ್ಗೆ 10 ಗಂಟೆಗೆ ಮೋರಟಗಿ ಗ್ರಾಮದಲ್ಲಿ ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 4 ಗಂಟೆಗೆ ಗೋಲಗೇರಿ ಜಿಲ್ಲಾ ಪಂಚಾಯತಿ ವ್ಯಾಪ್ತಿ ಗ್ರಾಮಗಳ ಕಾರ್ಯಕರ್ತರ ಸಾರ್ವಜನಿಕರ ಸಭೆ ನಡೆಸಲಿದ್ದಾರೆ. ಬಿಎಸ್ವೈ ಅವರಿಗೆ ಸಚಿವರು, ಜಿಲ್ಲಾ ಶಾಸಕರು ಸಾಥ್ ನೀಡಲಿದ್ದಾರೆ.