ಬೆಂಗಳೂರು: ರಾಜ್ಯದಲ್ಲಿ ಹಾನಗಲ್, ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆ (by election) ಸಂಬಂಧ ರಾಜಕೀಯ ಮುಖಂಡರ ಮಧ್ಯೆ ವಾಕ್ಸಮರ ಜೋರಾಗಿದೆ. ಎರಡೂ ಕ್ಷೇತ್ರಗಳಿಗೆ ಜೆಡಿಎಸ್ (JDS) ಮುಸ್ಲಿಂ ಅಭ್ಯರ್ಥಿಗಳನ್ನು ಹಾಕಿರುವ ಸಂಬಂಧ ಜೆಡಿಎಸ್ ನಾಯಕರು ಹಾಗೂ ಕಾಂಗ್ರೆಸ್ ನಾಯಕರ ಮಧ್ಯೆ ನಡೆಯುತ್ತಿರುವ ಟಾಕ್ ವಾರ್ ಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ (Zameer khan) ಎಂಟ್ರಿ ಕೊಟ್ಟಿದ್ದಾರೆ.

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ (HD Kumaraswamy) ವಿರುದ್ಧ ಸರಣಿ ಟ್ವೀಟ್ ಮೂಲಕ ಕುಟುಕಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒಬ್ಬ ಡೀಲ್ ಮಾಸ್ಟರ್. ದಿನದ 16 ಗಂಟೆ ಅವರ ಜೊತೆಗಿದ್ದವನು ನಾನು. ಅವರು ಲಾಭ ಇಲ್ಲದೆ ಏನೂ ಮಾಡುವುದಿಲ್ಲ. ಈಗ ಹಾನಗಲ್, ಸಿಂದಗಿಯಲ್ಲಿ ಬಿಜೆಪಿಗೆ ನೆರವಾಗುವ ಉದ್ದೇಶದಿಂದಲೇ ಮುಸ್ಲಿಂ ಅಭ್ಯರ್ಥಿಗಳನ್ನು ನಿಲ್ಲಿಸಿದ್ದು. ಇದೂ ಕೂಡ ಒಂದು ಡೀಲ್ ಎಂದು ಆರೋಪಿಸಿದ್ದಾರೆ.
ಇಬ್ರಾಹಿಂ ರಾಜೀನಾಮೆ ನೀಡಲಿ ನೋಡೋಣ
ಸಿ.ಎಂ.ಇಬ್ರಾಹಿಂ ಅವರು ಈಗಲೂ ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ. ಮೊನ್ನೆ ಮೊನ್ನೆಯವರೆಗೆ ಅವರು ಸಿದ್ದರಾಮಯ್ಯ ಅವರನ್ನು ಹೊಗಳುತ್ತಾ ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಬೈಯ್ಯುತ್ತಿದ್ದರು. ಈಗ ಪೂರ್ತಿ ಉಲ್ಟಾ ಹೊಡೆದಿದ್ದಾರೆ. ಆತ್ಮಾಭಿಮಾನ ಇದ್ದರೆ ಇಬ್ರಾಹಿಂ ಮೊದಲು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಲಿ ಎಂದು ಸವಾಲೆಸೆದರು 2004 ರಲ್ಲಿ ಸಿ.ಎಂ ಇಬ್ರಾಹಿಂ ಅವರು ತನ್ನನ್ನು ರಾಜ್ಯಸಭಾ ಸದಸ್ಯನಾಗಿ ಮಾಡುವಂತೆ ದೇವೇಗೌಡರನ್ನು ಬೇಡಿಕೊಂಡಿದ್ದರು. ಯಾಕೆ ಅವರನ್ನು ರಾಜ್ಯಸಭೆಗೆ ಕಳಿಸಿಲ್ಲ? ಅವರ ಅವಕಾಶಕ್ಕೆ ಅಡ್ಡಗಾಲು ಹಾಕಿದವರು ಯಾರು? ಕಾಂಗ್ರೆಸ್ ಪಕ್ಷವೇ? ಸಿದ್ದರಾಮಯ್ಯನವರಾ? ಇಲ್ಲವೇ ಕುಮಾರಸ್ವಾಮಿ ಅವರಾ ಎಂದು ಟ್ವೀಟ್ನಲ್ಲೇ ತಿವಿದಿದ್ದಾರೆ.