ದುಬೈ, ಅ. 18: ಭಾರತ ತಂಡ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನದ (India vs Pakistan match on Oct 24th) ವಿರುದ್ಧ ಅ. 24ರಂದು ಮೊದಲ ಪಂದ್ಯ ಆಡಲಿದೆ. ಅದಕ್ಕೆ ಪೂರ್ವಬಾವಿಯಾಗಿ ಎರಡು ಅಭ್ಯಾಸ ಪಂದ್ಯಗಳು ನಡೆಯಲಿವೆ. ಇವತ್ತು ಮತ್ತು ಅ. 20ರಂದು ಈ ಪಂದ್ಯಗಳು ಇವೆ. ಇವತ್ತು ಇಂಗ್ಲೆಂಡ್ ವಿರುದ್ಧ ಭಾರತ ಪ್ರಾಕ್ಟೀಸ್ ಮ್ಯಾಚ್ (India vs England Practice Match) ನಲ್ಲಿ ಆಡುತ್ತಿದೆ. ಬುಧವಾರದಂದು ಆಸ್ಟ್ರೇಲಿಯಾ ಜೊತೆ ಅಭ್ಯಾಸ ನಡೆಯಲಿದೆ.
ಭಾರತ ಮತ್ತು ಇಂಗ್ಲೆಂಡ್ ಸೇರಿದಂತೆ ಎಂಟು ತಂಡಗಳು ಟಿ20 ವಿಶ್ವ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವುದರಿಂದ ಟಿ20 ವಿಶ್ವಕಪ್ನಲ್ಲಿ ಸೂಪರ್-12 ಹಂತಕ್ಕೆ ನೇರ ಪ್ರವೇಶ ಪಡೆದಿವೆ. ಎರಡೂ ತಂಡಗಳು ಬಲಿಷ್ಠವಾಗಿವೆ. ಅನೇಕ ಸ್ಟಾರ್ ಆಟಗಾರರನ್ನ ಈ ತಂಡಗಳು ಒಳಗೊಂಡಿವೆ. ಐಪಿಎಲ್ನಲ್ಲಿ ಆಡಿದ ಕೆಲ ಇಂಗ್ಲೆಂಡ್ ಆಟಗಾರರ ಪೈಕಿ ಮೊಯೀನ್ ಅಲಿ ಮಾತ್ರ ಒಳ್ಳೆಯ ಫಾರ್ಮ್ಗೆ ಬಂದಿದ್ದಾರೆ. ತಂಡದ ನಾಯಕ ಇಯಾನ್ ಮಾರ್ಗನ್ ಐಪಿಎಲ್ವುದ್ದಕ್ಕೂ ನಿರಾಸೆ ಮೂಡಿಸಿದ್ದಾರೆ. ಇಂಗ್ಲೆಂಡ್ನ ಸ್ಪಿನ್ ಬೌಲರ್ ಅದಿಲ್ ರಷೀದ್ ಅವರು ಈ ವಿಶ್ವಕಪ್ನಲ್ಲಿ ಗೇಮ್ ಚೇಂಜರ್ ಆಗುವ ನಿರೀಕ್ಷೆ ಇದೆ.
ಇನ್ನೊಂದೆಡೆ, ಭಾರತ ತಂಡದ ಬಹುತೇಕ ಆಟಗಾರರು ಐಪಿಎಲ್ನಲ್ಲಿ ಫಾರ್ಮ್ಗೆ ಬಂದಿದ್ಧಾರೆ. ಕೊನೆ ಗಳಿಗೆಯಲ್ಲಿ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಕೂಡ ಅಮೋಘ ಪ್ರದರ್ಶನ ನೀಡಿ ಟಿ20 ವಿಶ್ವಕಪ್ನಲ್ಲಿ ಆರ್ಭಟಿಸುವ ಸುಳಿವು ನೀಡಿದ್ಧಾರೆ. ಹಾರ್ದಿಕ್ ಪಾಂಡ್ಯ ಹೊರತುಪಡಿಸಿ ಟೀಮ್ ಇಂಡಿಯಾದ ಬಹುತೇಕ ಆಟಗಾರರ ಲಯದಲ್ಲಿದ್ದಾರೆ. ಇದು ಭಾರತಕ್ಕೆ ಶುಭ ಸೂಚನೆ. ಆದರೆ, ಇವತ್ತು ನಡೆಯುವ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಹೇಗೆ ಪ್ರದರ್ಶನ ನೀಡಲಿದ್ಧಾರೆ ಕಾದು ನೋಡಬೇಕು.