ಕೋಟಿ ರೂ ಹಣವನ್ನು ನೀರಿನ ತೊಟ್ಟಿಗೆ ಹಾಕಿದ ಉದ್ಯಮಿ!
ಮಧ್ಯಪ್ರದೇಶದ ದಾಮೋಹ್ನಲ್ಲಿನ ಲಿಕ್ಕರ್ ಉದ್ಯಮಿ ಶಂಕರ್ ರೈ ಮನೆಗೆ ಶುಕ್ರವಾರ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಈ ವೇಳೆ ಮನೆಯಲ್ಲಿದ್ದ 8 ಕೋಟಿ ರೂಪಾಯಿ ನಗದು ಮತ್ತು 3 ಕೆಜಿ ಚಿನ್ನವನ್ನು ಜಪ್ತಿ ಮಾಡಲಾಗಿತ್ತು.
ಆದಾಯ ತೆರಿಗೆ ಇಲಾಖೆ ಕೈಗೆ ಸಿಗದಂತೆ ಉದ್ಯಮಿ ಹಣ ತುಂಬಿದ್ದ ಬ್ಯಾಗ್ ಅನ್ನು ನೀರಿನ ತೊಟ್ಟಿಯೊಳಗೆ ಬೀಸಾಡಿದ್ದರು. ಆದರೆ, ಅಧಿಕಾರಿಗಳ ಕಣ್ತಪ್ಪಿಸುವುದು ಅಷ್ಟು ಸುಲಭ ಅಲ್ಲ ಎಂಬುದನ್ನು ರೈ ಮರೆತಿದ್ದಾರೆ. ನೀರಿನ ತೊಟ್ಟಿಯಿಂದ ಬ್ಯಾಗ್ ವಶಕ್ಕೆ ಪಡೆದಿದ್ದು, ಅದನ್ನು ಒಣಗಿಸಿ ಲೆಕ್ಕಾಚಾರ ಮಾಡಿದ್ದಾರೆ. ಅಧಿಕಾರಿಗಳು ನೋಟನ್ನು ಒಣಗಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಕುರಿತು ಮಾತನಾಡಿರುವ ಆದಾಯ ತೆರಿಗೆ ಜಂಟಿ ಆಯುಕ್ತ ಮುನ್ಮುನ್ ಶರ್ಮಾ, ಆದಾಯ ತೆರಿಗೆ ಇಲಾಖೆಯು ರೈ ಕುಟುಂಬದಿಂದ 8 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ ನೀರಿನ ಕಂಟೈನರ್ನಲ್ಲಿ ತುಂಬಿದ್ದ 1 ಕೋಟಿ ರೂಪಾಯಿ ನಗದನ್ನು ಒಳಗೊಂಡ ಬ್ಯಾಗ್ ಕೂಡ ಸೇರಿದೆ. ಜತೆಗೆ ಮೂರು ಕೆಜಿ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಸದ್ಯ ಭೌತಿಕ ದಾಳಿ ಮುಗಿದಿದ್ದು, ರೈ ಕುಟುಂಬದಿಂದ ವಶಪಡಿಸಿಕೊಂಡ ದಾಖಲೆಗಳ ಆಧಾರದ ಮೇಲೆ ತನಿಖೆಯನ್ನು ಭೋಪಾಲ್ನಲಲಿ ಮುಂದುವರಿಯಲಿದೆ. ಇಲಾಖೆಯು ಈಗ ವಶಪಡಿಸಿಕೊಂಡ ದಾಖಲೆಗಳು ಮತ್ತು ಬೇನಾಮಿ ಆಸ್ತಿಗಳನ್ನು ತನಿಖೆ ಮಾಡಲಿದೆ. ಬಳಿಕ ಅಂತಿಮ ಹಣದ ವಾಹಿವಾಟಿನ ದಾಖಲೆ ದೊರಕಲಿದೆ ಎಂದಿದ್ದಾರೆ.
ಗುರುವಾರ ಬೆಳಗ್ಗೆ 6 ಗಂಟೆಗೆ ಆರಂಭವಾದ ದಾಳಿ 39 ಗಂಟೆಗಳ ಕಾಲ ಮುಂದುವರಿಯಿತು. ಶಂಕರ್ ರೈ ಕುಟುಂಬಕ್ಕೆ ಸೇರಿದ ಹತ್ತಕ್ಕೂ ಹೆಚ್ಚು ಸ್ಥಳಗಳ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಉದ್ಯಮಿ ಶಂಕರ್ ರೈ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಪುರಸಭೆ ಅಧ್ಯಕ್ಷರಾಗಿದ್ದರೆ, ಅವರ ಸಹೋದರ ಕಮಲ್ ರೈ ಬಿಜೆಪಿ ಮುಖಂಡರಾಗಿದ್ದು, ಪುರಸಭೆಯ ಉಪಾಧ್ಯಕ್ಷರಾಗಿದ್ದರು.