ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿ: ನೈಟ್ ಕರ್ಫ್ಯೂ ವಿಸ್ತರಣೆ, ಶಾಲೆಗಳು ಬಂದ್.!
ಬೆಂಗಳೂರು: ರಾಜ್ಯದಲ್ಲಿ ಕೊರೊನಾ(Corona) ಹಿನ್ನೆಲೆಯಲ್ಲಿ ಲಾಕ್‌ಡೌನ್ (Lockdown) ಸೇರಿದಂತೆ ಕಠಿಣ ಕ್ರಮಗಳ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ(CM Basavaraj Bommai) , ಆರೋಗ್ಯ ಸಚಿವ ಕೆ.ಸುಧಾಕರ್ ನೇತೃತ್ವದಲ್ಲಿ ತಜ್ಞರೊಂದಿಗೆ ಮಹತ್ವದ ಸಭೆ ನಡೆಸಿದರು. ಸಭೆ ಬಳಿಕ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಓಮಿಕ್ರಾನ್ ಕೋವಿಡ್ಗಿಂತ 5 ಪಟ್ಟು ಹೆಚ್ಚಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ ಎಂದು ಕಳಕಳಿ ವ್ಯಕ್ತಪಡಿಸಿದರು. ಇಂದು ಒಂದೇ ದಿನ 147 ಓಮಿಕ್ರಾನ್ ಕೇಸ್ ದಾಖಲಾಗಿದೆ, ಕಳೆದ 3 ದಿನಗಳಿಂದ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗುತ್ತಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಕಠಿಣ ನಿಮಯಗಳನ್ನು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಿಲಿಕಾನ್ ಸಿಟಿಯಲ್ಲೇ ಶೇ.85ರಷ್ಟು ಪ್ರಕರಣಗಳಿವೆ. ನಮ್ಮ ದೇಶದಲ್ಲಿ ಪಾಸಿಟಿವಿಟಿ ರೇಟ್ ಶೇ.3ಕ್ಕಿಂತ ಹೆಚ್ಚಾಗುತ್ತಿದೆ ಎಂದರು.
ಹೊಸ ಮಾರ್ಗಸೂಚಿ
- – ನೈಟ್ ಕರ್ಫ್ಯೂ ರಾತ್ರಿ 10- ಬೆಳಗ್ಗೆ 5ರವರೆಗೆ
- – ಎಲ್ಲ ಕಚೇರಿಗಳು 5 ದಿನಗಳ ಕಾಲ ಕಾರ್ಯನಿರ್ವಹಣೆ. ಸೋಮವಾರ – ಶುಕ್ರವಾರದವರೆಗೆ
- – ಸರ್ಕಾರಿ ಕಚೇರಿಗಳಲ್ಲಿ ಶೇ. 50 ಸಿಬ್ಬಂದಿ
- – ವೀಕೆಂಡ್ ಕರ್ಫ್ಯೂ ಶುಕ್ರವಾರ ರಾತ್ರಿ 10 – ಸೋಮವಾರ ಬೆಳಗ್ಗೆ 5ರವರೆಗೆ
- -ಹೊಸ ಮಾರ್ಗಸೂಚಿ ಜನವರಿ 5 ರ ರಾತ್ರಿ 10ರಿಂದ ಜನವರಿ 19 ರ ಬೆಳಗ್ಗೆ 5 ರವರೆಗೆ ಜಾರಿ
- – ವೀಕೆಂಡ್ ಕರ್ಫ್ಯೂ ವೇಳೆ ಅಗತ್ಯಕ್ಕೆ ಅನುಸಾರ ಸಮೂಹ ಸಾರಿಗೆಗಳು ಕಾರ್ಯ ನಿರ್ವಹಣೆ
- – ಬೆಂಗಳೂರಿನಲ್ಲಿ ನರ್ಸಿಂಗ್, ವೈದ್ಯಕೀಯ, ಪ್ಯಾರಾಮೆಡಿಕಲ್, 10, 11, 12 ನೇ ತರಗತಿಗಳು ಮಾತ್ರ ನಡೆಯಲು ಅನುಮತಿ
- – ಉಳಿದ ತರಗತಿಗಳು ಜನವರಿ 6 ರಿಂದಲೇ ಆನ್ಲೈನ್ ನಡೆಸಲು ಅನುಮತಿ
- – ಪಬ್, ಕ್ಲಬ್ ಹೊಟೇಲ್ ಗಳು, ಚಿತ್ರಮಂದಿರ, ರಂಗಮಂದಿರ, ಆಡಿಟೋರಿಯಂಗಳಿಗೆ ಶೇ.50 ಮಾತ್ರ ಅವಕಾಶ. ಡಬಲ್ ಡೋಸ್ ನವ್ರಿಗೆ ಮಾತ್ರ ಪ್ರವೇಶ
- – ಮದುವೆಗಳಿಗೆ ಹೊರಾಂಗಣ 200 ಜನ, ಒಳಾಂಗಣ 100 ಜನಕ್ಕೆ ಅನುಮತಿ
- -ಧಾರ್ಮಿಕ ಕೇಂದ್ರಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ. ವ್ಯಾಕ್ಸಿನ್ ಹಾಕಿಸಿಕೊಂಡ 50 ಭಕ್ತರಿಗೆ ಒಮ್ಮೆಲೆ ಮಾತ್ರ ಅವಕಾಶ. ಇತರೆ ದೇವರ ಸೇವೆಗಳಿಗೆ ಅವಕಾಶ ಇಲ್ಲ
- – ಸೋಮವಾರದಿಂದ ಶುಕ್ರವಾರದವರೆಗೆ ಮಾಲ್, ಷಾಪಿಂಗ್ ಕಾಂಪ್ಲೆಕ್ಸ್, ಅಂಗಡಿ ಮುಂಗಟ್ಟುಗಳಿಗೆ ಅವಕಾಶ
- – ಸ್ವಿಮ್ಮಿಂಗ್ ಪೂಲ್, ಜಿಮ್ ಗಳಲ್ಲಿ 50% ಗ್ರಾಹಕರಿಗೆ ಅನುಮತಿ. ಡಬಲ್ ಡೋಸ್ ಕಡ್ಡಾಯ
- – ರ್ಯಾಲಿ, ಧರಣಿಗಳಿಗೆ ಅವಕಾಶ ಇಲ್ಲ
- – ಸಭೆ, ಸಮಾರಂಭಗಳಿಗೆ 50 ಜನಕ್ಕೆ ಮಾತ್ರ ಅವಕಾಶ
ಮದುವೆ-ಸಮಾರಂಭಗಳಿಗೆ ರೂಲ್ಸ್
ಜ.6ರಿಂದ ಮುಂದಿನ 2 ವಾರ ಬೆಂಗಳೂರಲ್ಲಿ 10, 11ನೇ ತರಗತಿ ಹೊರತು ಪಡಿಸಿ ಉಳಿದೆಲ್ಲಾ ತರಗತಿಗಳಿಗೆ ಆನ್ಲೈನ್ ಕ್ಲಾಸ್ ನಡೆಸಲು ನಿರ್ಧಾರ. 10ನೇ ತರಗತಿ, ಪ್ರಥಮ ಪಿಯು ತರಗತಿಗಳು ಮಾತ್ರ ನಡೆಯಲಿದೆ. ಉಳಿದೆಲ್ಲಾ ಶಾಲೆಗಳು ಗುರುವಾರದಿಂದ ಬಂದ್ ಆಗಲಿವೆ. ಮುಂದಿನ ಎರಡು ವಾರ ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆವರೆಗೆ ವೀಕೆಂಡ್ ಕರ್ಫ್ಯೂ ಇರಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಶೇ.50ರಷ್ಟು ಮಾತ್ರ ಅನುಮತಿ. ಡಬಲ್ ಡೋಸ್ ಲಸಿಕೆ ಕಡ್ಡಾಯ. ಹೊರಾಂಗಣ ಮದುವೆಯಲ್ಲಿ 200 ಮಂದಿ, ಒಳಾಂಗಣ ಮದುವೆಯಲ್ಲಿ 100 ಜನ ಮಾತ್ರ ಭಾಗಿಯಾಗಬಹುದು. ಇಡೀ ರಾಜ್ಯದಲ್ಲಿ ಎರಡು ವಾರ ನೈಟ್ ಕರ್ಪ್ಯೂ ಇರಲಿದೆ.
ವಿದೇಶದಿಂದ ಬರುವವರಿಗೆ ಕಠಿಣ ಕ್ರಮಗಳು
ಆರೋಗ್ಯ ಸಚಿವ ಕೆ.ಸುಧಾಕರ್ ಮಾತನಾಡಿ, ವೇಗವಾಗಿ ಹರಡುತ್ತಿರೋ ಓಮಿಕ್ರಾನ್ ಹತೋಟಿಗೆ ನಮ್ಮ ಸರ್ಕಾರ ಸಿದ್ದ. ಮಹಾರಾಷ್ಟ್ರ, ತೆಲಂಗಾಣ, ದೆಹಲಿ ರಾಜ್ಯದ ಕ್ರಮದ ಬಗ್ಗೆ ಅವಲೋಕನ ಮಾಡಿದ್ದೇವೆ. ಬೇರೆ ಬೇರೆ ದೇಶದ ಬಗ್ಗೆ ಕೂಡ ಅವಲೋಕನ ಮಾಡಿದ್ದೇವೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಳ್ಳಲಾಗಿದೆ. ಸೋಂಕಿತ ಸಂಖ್ಯೆ ಕಳೆದ ನಾಲ್ಕು ದಿನದಲ್ಲಿ 3.18ರಷ್ಟಾಗಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಸೋಂಕು ಕಾಣಿಸಿಕೊಂಡಿದೆ. ವಿದೇಶದಿಂದ ಬರುವವರಿಗೆ ಕಡ್ಡಾಯ ಟೆಸ್ಟ್. ಹೈ ರಿಸ್ಕ್ ದೇಶದಿಂದ ಬರುವವರಿಗೆ ಟೆಸ್ಟ್ ಮಾಡಿ, ಸಾಂಸ್ಥಿಕ ಕೋರಂಟೈನ್ ಮಾಡುತ್ತೇವೆ. 2 ಸ್ಟಾರ್, 3 ಸ್ಟಾರ್, 5 ಸ್ಟಾರ್ ಹೋಟೆಲ್ಗಳ ದರ ಅವರೇ ಭರಿಸಬೇಕಾಗುತ್ತದೆ. ಬಜೆಟ್ ಹೋಟೆಲ್ ವೆಚ್ಚವನ್ನು ಸರ್ಕಾರ ಭರಿಸುತ್ತದೆ.
ಸಭೆಯಲ್ಲಿ ಸಿಎಂ ಸಲಹೆಗಳು
ಸಭೆಯಲ್ಲಿ ಸಿಎಂ ಕೆಲವೊಂದು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ. ಏಕಾಏಕಿ ಲಾಕ್‌ಡೌನ್ ಮಾಡಿದ್ರೆ, ಜನ ಆತಂಕಕ್ಕೊಳಗಾಗುತ್ತಾರೆ. ಮುಷ್ಕರ, ಪ್ರತಿಭಟನೆಗೆ, ಮೆರವಣಿಗೆಗೆ ಅವಕಾಶ ಬೇಡ. ನೈಟ್ ಕರ್ಫ್ಯೂ ಮುಂದುವರೆಸಿ, ಸದ್ಯಕ್ಕೆ ಬಿಗಿ ಬಂದೋಬಸ್ತ್ ರಾತ್ರಿ ವೇಳೆ ಮಾತ್ರ ಮಾಡೋಣ. ಲಸಿಕೆ ಅಭಿಯಾನ ನಿರಂತರವಾಗಿ ಇರಲಿ. ಬಿಬಿಎಂಪಿ ವ್ಯಾಪ್ತಿಯ 8 ಮಂದಿ ಉಸ್ತುವಾರಿಗಳು ಆ್ಯಕ್ಟೀವ್ ಆಗಬೇಕು ಎಂದು ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ. ಸಂಕ್ರಾಂತಿ ಆಚರಣೆ ಎಚ್ಚರಿಕೆಯಿಂದ ಮಾಡಿ, ಗಡಿ ಕಟ್ಟೆಚ್ಚರ ಮಾಡಬೇಕು. ಕೇರಳ, ಮಹಾರಾಷ್ಟ್ರದ ಬಗ್ಗೆ ಎಚ್ಚರಿಕೆ ಬೇಕು ಎಂದು ಸಿಎಂ ಸಲಹೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಸಭೆಯಲ್ಲಿ ಬಿಬಿಎಂಪಿ ಆಯುಕ್ತರು, ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೆ ತಂದರೆ ಒಳಿತು ಎಂದು ಸಲಹೆ ನೀಡಿದ್ದರು. ಭಾನುವಾರ ಒಂದು ದಿನ ಲಾಕ್‌ಡೌನ್ ಅಥವಾ ಬಿಗಿ ಕ್ರಮ ಖಚಿತ ಮಾಡೋಣ ಎಂದು ಗೌರವ್ ಗುಪ್ತಾ ಸಲಹೆ ನೀಡಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಕೋವಿಡ್ ಸ್ಥಿತಿ ಗತಿ ಕುರಿತಂತೆ ಸಚಿವರು, ತಜ್ಞರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಚಿವರಾದ ಆರ್. ಅಶೋಕ್, ಡಾ. ಸಿ.ಎನ್. ಅಶ್ವತ್ಥನಾರಾಯಣ, ಡಾ. ಕೆ. ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ್ ಉಪಸ್ಥಿತರಿದ್ದರು.