ಮಕ್ಕಳು ಸಕ್ರಿಯವಾಗಿ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾಗಿ: ಎನ್.ಜೋಸೆಫ್

ಚಾಮರಾಜನಗರ: ಮಕ್ಕಳು ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸೋಲು ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗ್ರೇಡ್-2 ದೈಹಿಕ ಶಿಕ್ಷಕ ಸಂಘದ ರಾಜ್ಯ ಉಪಾಧ್ಯಕ್ಷ ಎನ್.ಜೋಸೆಫ್ ತಿಳಿಸಿದರು.
ನಗರದ ಸಿದ್ಧಾರ್ಥ ನಗರದಲ್ಲಿರುವ ಸಂತಜೋಷೇಪರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 2024-25 ನೇ ಸಾಲಿನ ಶಾಲಾ ವಾರ್ಷಿಕ ಕ್ರೀಡಾ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಲೆಜಿಂ, ಡಂಬಲ್ಸ್, ಉಪ್ಸ್ ಸೇರಿದಂತೆ ವಿವಿಧ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ಮಾಡಿರುವುದು ತುಂಬಾ ಸಂತೋಷಕರ.

ಕ್ರೀಡೆಯಲ್ಲಿ ವಿಜೇತರಾದ ಮಕ್ಕಳು ಹಿಗ್ಗದೆ ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನಮಾನ ಗಳಿಸಬೇಕು. ಅಲ್ಲದೆ ಸೋತ ಮಕ್ಕಳು ಕುಗ್ಗದೆ ಮುಂದಿನ ದಿನಗಳಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತರಬೇಕು ಎಂದು ತಿಳಿಸಿದರು.
ಇದೇ ವೇಳೆ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ 1ರಿಂದ 7ನೇ ತರಗತಿಯ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ಅಲ್ಲದೆ ತಾಲೂಕು ಮಟ್ಟದಿಂದ ರಾಜ್ಯಮಟ್ಟದವರೆಗೆ ಪ್ರತಿನಿಧಿಸಿದ ವಿದ್ಯಾ ಎಂಬ ವಿದ್ಯಾರ್ಥಿಗೆ ಸಂಸ್ಥೆ ವತಿಯಿಂದ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಿಶೇಷ ಆಹ್ವಾನಿತರಾದ ಟ್ರಾಫಿಕ್ ಪೊಲೀಸ್ ವಸಂತ ಕುಮಾರ್, ಅಗ್ನಿಶಾಮಕ ಇಲಾಖೆಯ ಬೀರಪ್ಪ ಕಳಸಪುರದ, ಸಂಸ್ಥೆಯ ವ್ಯವಸ್ಥಪಾಕರಾದ ಲೀನಾ ಜ್ಯೋತಿ, ಮುಖ್ಯ ಶಿಕ್ಷಕರಾದ ರೀಟಾ ಜೇನ್, ದೈಹಿಕ ಶಿಕ್ಷಕ ಮಹದೇವಯ್ಯ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ಪೋಷಕರು ಹಾಜರಿದ್ದರು.
ವರದಿ:ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ