ರಾಜ್ಯ

ನಟ ಪುನೀತ್ ರಾಜ್​​ಕುಮಾರ್​ಗೆ ಪದ್ಮಶ್ರೀ..?

ಬೆಂಗಳೂರು: ಅಗಲಿದ ನಟ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿದ್ದೇವೆ. ಪ್ರಶಸ್ತಿ ಪ್ರದಾನ ಮಾಡುವ ಕಾರ್ಯಕ್ರಮದ ದಿನಾಂಕ ಶೀಘ್ರ ಪ್ರಕಟ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ತಿಳಿಸಿದರು.

ಸಂತಾಪ ಸೂಚಕದ ನಿರ್ಣಯದ ಮೇಲೆ ಮಾತನಾಡಿದ ಸಿಎಂ, ಅದೇ ರೀತಿ ಶೀಘ್ರದಲ್ಲೇ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡುತ್ತೇವೆ. ವಿಪಕ್ಷದ ನಾಯಕರು ಸಹ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡುವಂತೆ ಪತ್ರ ಬರೆದಿದ್ದರು ಎಂದು ಹೇಳಿದರು. ಪ್ರತಿಭೆ ಮತ್ತು ಸಾಧಕರು ಅಲ್ಪಾಯುಷಿಗಳು ಎಂಬುದು ಸಾಬೀತಾಗುತ್ತಿದೆ. ನಟ ಪುನೀತ್ ರಾಜಕುಮಾರ್ ವಿಚಾರದಲ್ಲೂ ಹಾಗೆ ಆಯ್ತು ಅನ್ನಿಸುತ್ತದೆ. ಇದೊಂದು ದೊಡ್ಡ ಅಘಾತ. ಯಾರೂ ಹೀಗೆ ಸಾವನ್ನ ನಿರೀಕ್ಷೆ ಮಾಡಿರಲಿಲ್ಲ ಎಂದರು.

ನಾವು ಆಸ್ಪತ್ರೆಗೆ ಹೋಗುವಷ್ಟರಲ್ಲಿ ಪುನೀತ್ ಅವರ ನಿಧನ ಘೋಷಿಸಿದ್ದರು. ಅವರ ಸಾವನ್ನು ನಂಬಲು ಸಾಧ್ಯವಾಗಲಿಲ್ಲ.‌ ಕುಟುಂಬದ ಸಹಕಾರದಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಂತಿಮ ಸಂಸ್ಕಾರ ಮಾಡಲಾಯಿತು. ಅದಕ್ಕೆ ನಮ್ಮ ಪೊಲೀಸ್, ಬಿಬಿಎಂಪಿ ಹಾಗೂ ಎಲ್ಲರ ಸಹಕಾರ ಮುಖ್ಯವಾಗಿತ್ತು. ಅವರ ನಿಧನದ ಬಳಿಕ ಹರಿದುಬಂದ ಜನ ಸಾಗರದಿಂದ ಎಂತಹ ಹೆಸರು ಮಾಡಿದ್ದರೆಂದು ಗೊತ್ತಾಗುತ್ತದೆ. ಅವರ ಸಮಾಜ ಸೇವೆ, ಜನರಿಗೆ ಸಹಾಯ ಮಾಡಿರುವುದು ಶ್ಲಾಘನೀಯ. ನನ್ನ ಬಳಿ ಒಂದು ಆ್ಯಪ್ ರಿಲೀಸ್ ಮಾಡಿದ್ದರು. ಒಂದು ಟ್ರೈಲರ್ ಬಿಡುಗಡೆ ಮಾಡುವ ಬಗ್ಗೆ ಕೂಡ ಚರ್ಚೆ ನಡೆಸಿದ್ದರು. ಅರಣ್ಯಕ್ಕೆ ಸಂಬಂಧಿಸಿದ ವಿಚಾರ ಅಂತ ಹೇಳಿದರು. ಆದರೆ ನನ್ನ ಅಪಾಯಿಂಟ್ಮೆಂಟ್​​ಗಿಂತ ಮೇಲಿರುವ ಅಪಾಯಿಂಟ್ಮೆಂಟ್‌ಗೆ ಬೆಲೆ ಕೊಟ್ಟರು. ತಂದೆಯವರಂತೆ ಅವರೂ ನಟನಾ ಪ್ರತಿಭೆ ಪಡೆದಿದ್ದರು. ಅಂತವರನ್ನು ನಾವು ಕಳೆದುಕೊಂಡಿದ್ದೇವೆ. ಅವರ ನಿಧನದಿಂದ ಕರ್ನಾಟಕ ಬಡವಾಗಿದೆ ಎಂದು ಕಂಬನಿ ಮಿಡಿದರು.

ನಿಧನಕ್ಕೆ ಸಂತಾಪ:

ಶಿವರಾಮ್​

ಹಿರಿಯ ನಟ ಶಿವರಾಮ್ ಸಹ ಅತ್ಯುತ್ತಮ ನಟರಾಗಿದ್ದರು. ಜೊತೆಗೆ ಅಯ್ಯಪ್ಪ ಸ್ವಾಮಿ ಭಕ್ತರಾಗಿದ್ದರು. ಪುನೀತ್ ರಾಜ್​ಕುಮಾರ್ ನಿಧನರಾಗಿದ್ದ ವೇಳೆ ನನ್ನ ಜೊತೆ ಮಾತನಾಡಿದ್ದರು. ಅವರನ್ನು ಇಷ್ಟು ಬೇಗ ಕಳೆದುಕೊಳ್ಳುತ್ತೇವೆಂದು ತಿಳಿದುಕೊಂಡಿರಲಿಲ್ಲ. ಸುಮಾರು ಮೂನ್ನೂರು ಚಿತ್ರಗಳಲ್ಲಿ ನಟಿಸಿದ್ದ ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ ಎಂದರು.

ಕೆ. ರೋಸಯ್ಯ

ರಾಜಕಾರಣದಲ್ಲಿ ಹಂತ ಹಂತವಾಗಿ ಮೇಲೆ ಬಂದವರು ಮಾಜಿ ರಾಜ್ಯಪಾಲ ಕೆ. ರೋಸಯ್ಯನವರು. ಮುಖ್ಯಮಂತ್ರಿಯಾಗಿ, ಹಣಕಾಸು ಸಚಿವರಾಗಿಯೂ ಕೆಲಸ ಮಾಡಿದ್ದಾರೆ. 16 ಬಾರಿ ಹಣಕಾಸು ಸಚಿವರಾಗಿ, ಅತಿಹೆಚ್ಚು ಬಾರಿ ಮಂಡನೆ ಮಾಡಿದರು. ಧೀಮಂತ ನಾಯಕರಾಗಿದ್ದ ಅವರು, ಸಿಎಂ ಆಗಿ, ರಾಜ್ಯಪಾಲರಾಗಿ ಹಲವು ಕೆಲಸ ಮಾಡಿದ್ದಾರೆ.

ಹೆಲಿಕಾಪ್ಟರ್ ಅಪಘಾತ ಧಿಗ್ಭ್ರಮೆಗೊಳಿಸಿದೆ:

ಸೇನಾ ಮುಖ್ಯಸ್ಥ ಬಿಪಿನ್ ರಾವತ್ ನಿಧನಕ್ಕೂ ಸಂತಾಪ ವ್ಯಕ್ತಪಡಿಸಿದ ಸಿಎಂ, ಹೆಲಿಕಾಪ್ಟರ್ ಅಪಘಾತ ಧಿಗ್ಭ್ರಮೆಗೊಳಿಸಿದೆ. ನಮ್ಮಲ್ಲಿರುವ ಅನೇಕ ಸೇನಾ ಮುಖ್ಯಸ್ಥರ ಸಾಲಿಗೆ ಬಿಪಿನ್ ರಾವತ್ ಸೇರುತ್ತಾರೆ. ಚೀನಾ ಗಡಿಯಲ್ಲಿ ಚೈನಾದಿಂದ ಸೇನೆ ನೇಮಕ ಮಾಡಿದಾಗ, ಭಾರತದ ಸೇನೆಯನ್ನೂ ದೊಡ್ಡ ಮಟ್ಟದಲ್ಲಿ ನಿಲ್ಲಿಸಿ ಸಜ್ಜುಗೊಳಿಸಲಾಗಿತ್ತು. ಹಲವು ಪದಕಗಳನ್ನು ಅವರು ಗಳಿಸಿದ್ದರು ಎಂದು ಹೇಳಿದರು.

ಪ್ರತಿಯೊಬ್ಬ ಭಾರತೀಯರ ಹೃದಯದಲ್ಲಿ ಬಿಪಿನ್ ರಾವತ್ ಅವರು ಮತ್ತಷ್ಟು ಸೇವೆ ನೀಡಬೇಕಿತ್ತು. ಅವರ ಜೊತೆಯಲ್ಲಿ ಪತ್ನಿ ಹಾಗೂ ಇತರ ಸೈನಿಕರು ಸಾವನ್ನಪ್ಪಿದರು. ವರುಣ್ ಸಿಂಗ್ ಒಬ್ಬರು ಬದುಕುಳಿದಿದ್ದು, ನಮ್ಮ ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾನು ಹೋಗಿ ಅವರನ್ನು ನೋಡಿಕೊಂಡು ಬಂದಿದ್ದೇನೆ ಎಂದು ತಿಳಿಸಿದರು.

ಸೇನೆಯ ಒಳಗಡೆ ಮಾತ್ರ ಅಲ್ಲದೆ ಸಾಮಾನ್ಯ ಜನರಲ್ಲೂ ರಾವತ್ ಅವರ ಬಗ್ಗೆ ಅಪಾರ ಅಭಿಮಾನ ಇದೆ ಎಂದರು. ಸರ್ಜಿಕಲ್ ಸ್ಟ್ರೈಕ್ ಕಾರ್ಯತಂತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗಡಿ ಸುರಕ್ಷತೆ, ಸ್ಟ್ರಾಟಜಿಕ್ ಅಡ್ಮಿನಿಸ್ಟ್ರೇಶನ್ ಬಗ್ಗೆ ಅಪಾರ ಅನುಭವ ಹೊಂದಿದ್ದರು. ಅವರ ನಿಧನ ಸೇನೆಗೆ ಅಪಾರ ನಷ್ಟವಾಗಿದೆ. ಸೇನೆಯ ಆಧುನೀಕರಣ ಹಾಗೂ ಭಾರತೀಕರಣ ಚಿಂತನೆಯನ್ನು ಮುಂದುವರಿಸುವುದೇ ನಿಜವಾದ ಶ್ರದ್ಧಾಂಜಲಿ ಎಂದರು.

ಮಾಜಿ ಸಚಿವ ಎಸ್.ಆರ್ ಮೋರೆ ನಮ್ಮ ಜಿಲ್ಲೆಯವರು. ಯಾವುದೇ ವಿಚಾರದಲ್ಲೂ ನೇರವಾಗಿ ಹೇಳುತ್ತಿದ್ದರು. ತಮ್ಮ ಸಮುದಾಯಕ್ಕಾಗಿ ಉತ್ತಮ ಕೆಲಸ ಮಾಡಿದ್ದರು ಎಂದ ಸಿಎಂ, ರಾಮಭಟ್, ಡಾ. ಕರ್ಕಿ, ವಿರೂಪಾಕ್ಷಪ್ಪ ಅಗಡಿ ಸೇರಿದಂತೆ ಅಗಲಿದ ಇತರ ಗಣ್ಯರಿಗೂ ಸಿಎಂ ಸಂತಾಪ ಸೂಚಿಸಿದರು.

Related Articles

Leave a Reply

Your email address will not be published. Required fields are marked *

Back to top button