ಪ್ರಭಾಸ್ ಕಡೆಯಿಂದ ಕರೀನಾ ಕಪೂರ್ ಗೆ ಸಿಕ್ತು ವಿಶೇಷ ಉಡುಗೊರೆ
ಸೌತ್ ಸ್ಟಾರ್, ಪ್ಯಾನ್ ಇಂಡಿಯಾ ಹೀರೋ ಪ್ರಭಾಸ್ ಕಡೆಯಿಂದ ಬಾಲಿವುಡ್ ಸ್ಟಾರ್ ನಟಿ ಕರೀನಾ ಕಪೂರ್ ಗೆ ವಿಶೇಷ ಉಡುಗೊರೆ ಸಿಕ್ಕಿದೆ. ಪ್ರಭಾಸ್ ಉಡುಗೊರೆಯನ್ನು ಕರೀನಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಪ್ರಭಾಸ್ ಕೊಟ್ಟ ಗಿಫ್ಟ ಏನು ಅಂತೀರಾ?, ಕರೀನಾ ಕಪೂರ್ ಅವರಿಗೆ ವಿಶೇಷ ಬಿರಿಯಾನಿ ಕಳುಹಿಸಿಕೊಟ್ಟಿದ್ದಾರೆ.
ಪ್ರಭಾಸ್ ತನ್ನ ಸಹ ನಟರಿಗೆ ವಿಶೇಷವಾದ ಟ್ರೀಟ್ ಕೊಡಿಸುವುದರಲ್ಲಿ ಎತ್ತಿದ ಕೈ. ಆಗಾಗ ಪ್ರಭಾಸ್ ಕಡೆಯಿಂದ ಭಾರಿ ಭೋಜನ ಸವಿಯುತ್ತಿರುತ್ತಾರೆ. ಈ ಬಾರಿ ಪ್ರಭಾಸ್ ವಿಶೇಷ ಆತಥ್ಯ ಕರೀನಾ ಕಪೂರ್ ಪಾಲಾಗಿದೆ. ಪ್ರಭಾಸ್ ಮತ್ತು ಕರೀನಾ ಪತಿ, ನಟ ಸೈಫ್ ಅಲಿ ಖಾನ್ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದಿಪುರುಷ್ ಸಿನಿಮಾದಲ್ಲಿ ಪ್ರಭಾಸ್ ರಾಮನಾಗಿ ಕಾಣಿಸಿಕೊಂಡರೆ ಸೈಫ್ ಅಲಿ ಖಾನ್ ರಾವಣನಾಗಿ ಮಿಂಚಿದ್ದಾರೆ.
ಸೈಫ್ ಮತ್ತು ಪ್ರಭಾಸ್ ನಡುವೆ ಉತ್ತಮ ಬಾಂಧವ್ಯವಿದೆ. ಹಾಗಾಗಿ ಪ್ರಭಾಸ್, ಕರೀನಾ ಕಪೂರ್ ಅವರಿಗೆ ವಿಶೇಷವಾದ ಬಿರಿಯಾನಿ ಕಳುಹಿಸಿಕೊಟ್ಟಿದ್ದಾರೆ. ಪ್ರಭಾಸ್ ಕಳುಹಿಸಿದ ಬಿರಿಯಾನಿ ಫೋಟೋವನ್ನು ಕರೀನಾ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ರುಚಿಕರವಾದ ಬಿರಿಯಾನಿ ಫೋಟೋ ಜೊತೆಗೆ, ” ಬಾಹುಬಲಿ ನಿಮಗಾಗಿ ಬಿರಿಯಾನಿ ಕಳುಹಿಸಿದಾಗ ಅದು ಅತ್ಯುತ್ತಮವಾಗಿರುತ್ತದೆ. ಟ್ರೀಟ್ ಗೆ ಧನ್ಯವಾದಗಳು ಪ್ರಭಾಸ್” ಎಂದು ಬರೆದುಕೊಂಡಿದ್ದಾರೆ.
ಇತ್ತೀಚಿಗಷ್ಟೆ ಕರೀನಾ ಕಪೂರ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 41ನೇ ವಸಂತಕ್ಕೆ ಕಾಲಿಟ್ಟ ಕರೀನಾ ಮಾಲ್ಡೀವ್ಸ್ ನಲ್ಲಿ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ. ಪತಿ ಸೈಫ್ ಅಲಿ ಖಾನ್ ಮತ್ತು ಇಬ್ಬರು ಮಕ್ಕಳು ಸಹ ಮಾಲ್ಡೀವ್ಸ್ ಪಯಣ ಬೆಳೆಸಿದ್ದರು. ಸದ್ಯ ಭಾರತಕ್ಕೆ ವಾಪಸ್ ಆಗಿರುವ ಕರೀನಾ ದಂಪತಿ ಪ್ರಭಾಸ್ ಕಳುಹಿಸಿದ ಬಿರಿಯಾನಿ ಸವಿದು ಖುಷಿ ಹಂಚಿಕೊಂಡಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾರೆ ಕರೀನಾ ಕಪೂರ್ ಸದ್ಯ ಸಿನಿಮಾದಿಂದ ಬ್ರೇಕ್ ಪಡೆದಿದ್ದಾರೆ. ಈಗಾಗಲೇ ಕರೀನಾ, ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಚಿತ್ರೀಕರಣ ಮುಗಿಸಿದ್ದು, ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಸಿನಿಮಾ ಬಳಿಕ ಕರೀನಾ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ಇಬ್ಬರು ಮಕ್ಕಳ ಆರೈಕೆಯಲ್ಲಿ ಕರೀನಾ ಬ್ಯುಸಿಯಾಗಿದ್ದಾರೆ.
ಇನ್ನು ನಟ ಸೈಫ ಅಲಿ ಖಾನ್ ಬಹುನಿರೀಕ್ಷೆಯ ಆದಿಪುರುಷ್ ಸಿನಿಮಾ ಜೊತೆಗೆ ಬಂಟಿ ಔರ್ ಬಬ್ಲಿ-2 ಸಿನಿಮಾ ಕೂಡ ಕೈಯಲ್ಲಿದೆ. ಇತ್ತೀಚಿಗಷ್ಟೆ ಸೈಫ ಭೂತ್ ಪೊಲೀಸ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಇನ್ನು ಪ್ರಭಾಸ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದಿಪುರುಷ್ ಜೊತೆಗೆ ಸಲಾರ್ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಎರಡು ಸಿನಿಮಾಗಳ ಜೊತೆಗೆ ಇನ್ನು ಹೆಸರಿಡದ ನಿರ್ದೇಶಕ ನಾಗ ಅಶ್ವಿನ್ ನಿರ್ದೇಶನದ ಸಿನಿಮಾ ಕೂಡ ಪ್ರಭಾಸ್ ಬಳಿ ಇದೆ.