ಚೆನ್ನೈ; ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ (BJP) ಪಕ್ಷ ಗಟ್ಟಿ ನೆಲೆ ಹೊಂದಿದೆ. ಧರ್ಮವನ್ನು ಮುಂದಿಟ್ಟು ತನ್ನ ಪಕ್ಷಕ್ಕೆ ಬಹುಸಂಖ್ಯಾತ ಮತಗಳ ಧ್ರುವೀಕರಣ ಮಾಡಿದೆ ಮತ್ತು ಅದರ ಫಲವನ್ನು ಇಂದು ಅನುಭವಿಸುತ್ತಿದೆ ಎಂಬುದು ಎಷ್ಟು ಸತ್ಯವೋ? ದ್ರಾವಿಡ ನಾಡು ತಮಿಳುನಾಡಿನಲ್ಲಿ (Tamilnadu) ಏನೇ ಕಸರತ್ತು ನಡೆಸಿದರೂ ಅಲ್ಲಿನ ಮತದಾರರನ್ನು ಮರಳು ಮಾಡಲು ಸಾಧ್ಯವಾಗಲಿಲ್ಲ ಎಂಬುದು ಅಷ್ಟೇ ಸತ್ಯ.
ಅದಕ್ಕೆ ಮತ್ತೊಂದು ತಾಜಾ ಉದಾಹರಣೆಯೊಂದು ಲಭ್ಯವಾಗಿದೆ. ತಮಿಳುನಾಡಿನಲ್ಲಿ ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲಾಗಿತ್ತು. ಆದರೆ, ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಯೊಬ್ಬರು ಕೇವಲ ಒಂದು ಮತ ಪಡೆದು ನಗೆಪಾಟೀಲುಗೀಡಾದ ಘಟನೆ ನಡೆದಿದೆ. ತಮಿಳುನಾಡು ಚುನಾವಣಾ ರಾಜಕಾರಣದಲ್ಲೇ (Tamilnadu Local Election) ಕೇವಲ ಒಂದು ಮತ ಪಡೆದ ಅಭ್ಯರ್ಥಿ ಎಂಬ ಕುಖ್ಯಾತಿಗೆ ಇದೀಗ ಬಿಜೆಪಿ ಅಭ್ಯರ್ಥಿ ಒಳಗಾಗಿದ್ದಾರೆ.
ಬಿಜೆಪಿ ಅಭ್ಯರ್ಥಿ ಡಿ.ಕಾರ್ತಿಕ್ ಕೊಯಮತ್ತೂರು ಜಿಲ್ಲೆಯ ಪೆರಿಯನೈಕೆನ್ಪಾಳ್ಯಂ ವಾರ್ಡ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಅವರ ಕುಟುಂಬದಲ್ಲಿಯೇ 5 ಜನ ಮತದಾರರಿದ್ದರು ಸಹ ಅವರು ಕೇವಲ ಒಂದೇ ಒಂದು ಮತ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ. ಅದು ಅವರದೇ ಮತ ಎಂದು ಹಲವರು ವ್ಯಂಗ್ಯವಾಡಿದ್ದು ಟ್ವಿಟರ್‌ನಲ್ಲಿ ‘ಸಿಂಗಲ್ ವೋಟ್ ಬಿಜೆಪಿ’ ಎಂದು ಟ್ರೋಲ್ ಮಾಡುತ್ತಿದ್ದಾರೆ. ಈ ಮೂಲಕ ತಮಿಳುನಾಡಿನ ಜನ ತಮ್ಮ ಮನೆಯವನೇ ಅಭ್ಯರ್ಥಿಯಾದರೂ ಬಿಜೆಪಿಗೆ ಮತ ಹಾಕಲ್ಲ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ.