ನಟ ಪ್ರಕಾಶ್ ರೈ ಅವರು ತೆಲುಗು ಮೂವಿ ಆರ್ಟಿಸ್ಟ್ಸ್ ಅಸೋಸಿಯೇಷನ್‌ನಿಂದ (MAA) ಹೊರನಡೆದಿದ್ದಾರೆ. ಸಂಘದ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ನಟ ಮಂಚು ವಿಷ್ಣು ವಿರುದ್ಧ ರೈ ಸೋತಿದ್ದರು.
‘ನಾನು ಹೈದರಾಬಾದ್‌ನಲ್ಲಿ ಅತಿಥಿಯ ಹಾಗೆ ಇರಬೇಕು ಎಂದು ಮೋಹನಬಾಬು, ಕೋಟ ಶ್ರೀನಿವಾಸ ರಾವ್ ಅವರಂತಹ ನಟರು ಹೇಳಿದ್ದಾರೆ. ಹಾಗಾಗಿ, ಇಲ್ಲಿ ನಾನು ಆಹ್ವಾನಿತನ ರೀತಿಯಲ್ಲಿಯೇ ಇರುತ್ತೇನೆ. ‘ಮಾ’ ಸದಸ್ಯತ್ವ ಬೇಡ. ನಾನು ಲೋಕಸಭಾ ಚುನಾವಣೆಯಲ್ಲಿಯೂ (ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನಿಂದ ಅವರು ಸ್ಪರ್ಧಿಸಿದ್ದರು) ಸೋತಿದ್ದೇನೆ. ಆದರೆ ರಾಜಕೀಯ ಬಿಟ್ಟಿಲ್ಲ. ಇನ್ನು ಮುಂದೆ ‘ಮಾ’ದಲ್ಲಿ ಇರುವುದಿಲ್ಲ. ಆದರೆ, ತೆಲುಗು ಚಿತ್ರರಂಗದಲ್ಲಿ ಇರುತ್ತೇನೆ’ ಎಂದು ರೈ ಹೇಳಿದ್ದಾರೆ.
ಮಂಚು ವಿಷ್ಣು ಅವರು ನಟ ಮೋಹನ್ ಬಾಬು ಅವರ ಮಗ. ಮತದಾರರ ತೀರ್ಪನ್ನು ಗೌರವಿಸುತ್ತೇನೆ. ಈ ಚುನಾವಣೆಯಲ್ಲಿ ರಾಷ್ಟ್ರೀಯತೆ ಕೂಡ ಮುಖ್ಯ ವಿಷಯವಾಗಿತ್ತು ಎಂದಿದ್ದಾರೆ.