ನವ ದೆಹಲಿ (ಅಕ್ಟೋಬರ್ 12); “ಉತ್ತರಪ್ರದೇಶವನ್ನು (UttaraPradesh) ಗೆದ್ದವರು ಇಡೀ ದೇಶವನ್ನೇ ಗೆದ್ದಂತೆ” ಎಂಬ ನಾಡ್ನುಡಿ ರಾಜಕೀಯ ವಲಯದಲ್ಲಿ ಯಾವಾಗಲೂ ಚಾಲ್ತಿಯಲ್ಲಿರುವ ಅಂಶ. ರಾಜ್ಯದ ಅತ್ಯಂತ ದೊಡ್ಡ ರಾಜ್ಯವಾದ ಉತ್ತರಪ್ರದೇಶ ನಿಜಕ್ಕೂ ಈ ದೇಶದ ಪ್ರಧಾನಿ ಯಾರಾಗಬೇಕು? ಎಂಬುದನ್ನು ನಿರ್ಧರಿಸುತ್ತದೆ. ಇದೇ ಕಾರಣಕ್ಕೆ ಕಳೆದ 70 ವರ್ಷಗಳಿಂದ ಎಲ್ಲಾ ಪ್ರಧಾನಿ ಅಭ್ಯರ್ಥಿಗಳು ಉತ್ತರಪ್ರದೇಶದ ಯಾವುದಾದರೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವುದು ವಾಡಿಕೆಯಾಗಿದೆ.
ಇದೇ ಕಾರಣಕ್ಕೆ ಇಲ್ಲಿನ ಗೆಲುವಿನ ಮೇಲೆ ಎಲ್ಲಾ ಪಕ್ಷಗಳೂ ಕಣ್ಣಿಟ್ಟಿರುತ್ತವೆ. ಈ ರಾಜ್ಯದಲ್ಲಿ ಕಳೆದ ಎರಡೂ ಚುನಾವಣೆಯಲ್ಲಿ ಬಿಜೆಪಿ ಅಭುತಪೂರ್ವ ಗೆಲುವು ದಾಖಲಿಸಿದ್ದ ಕಾರಣದಿಂದಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಕೇಂದ್ರದಲ್ಲಿ ಬಹುಮತದ ಸರ್ಕಾರವನ್ನು ರಚಿಸಲು ಸಾಧ್ಯವಾಗಿತ್ತು. ಆದರೆ, ಇದೀಗ ಉತ್ತರಪ್ರದೇಶದ ಲಖೀಂಪುರ್ ಖೇರಿ (Lakhimpur Kheri Massacre) ರೈತ ಹತ್ಯಾಕಾಂಡ ಬಿಜೆಪಿ ಸರ್ಕಾರಕ್ಕೆ ನುಂಗಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ಈ ಬೆಳವಣಿಗೆ ಚುನಾವಣೆ (UttaraPradesh Assembly Election) ಮೇಲೆ ಪರಿಣಾಮ ಬೀರಲಿದೆಯೇ? ಎಂದು ಬಿಜೆಪಿ ಚಿಂತಿಸುತ್ತಿದೆ. ಅಲ್ಲದೆ, ಈ ಬಗ್ಗೆ ಚರ್ಚಿಸಲು ದೆಹಲಿಯ ಕಚೇರಿಯಲ್ಲಿ 4 ಗಂಟೆಗಳ ಸಭೆಯನ್ನು ಏರ್ಪಡಿಸಿದೆ ಎಂದು ತಿಳಿದುಬಂದಿದೆ.
ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ ಹಿರಿಯ ನಾಯಕರ ಸಭೆಯಲ್ಲಿ ಉತ್ತರಪ್ರದೇಶದ ವಿಧಾನಸಭಾ ಚುನಾವಣೆ ಬಗ್ಗೆ ಚರ್ಚೆ ನಡೆಯಲಿದೆ. ಈ ಸಭೆಯಲ್ಲಿ ಅಕ್ಟೋಬರ್ 03 ರಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶೀಶ್ ಮಿಶ್ರಾ ರೈತ ಮೇಲೆ ಕಾರು ಹತ್ತಿಸಿ ನಾಲ್ಕು ಜನರ ಸಾವಿಗೆ ಕಾರಣನಾಗಿದ್ದ ಮತ್ತು ಈ ಮೂಲಕ ಹಿಂಸಾಚಾರಕ್ಕೆ ನಾಂದಿ ಹಾಡಿದ್ದ ವಿಚಾರವನ್ನು ಉಲ್ಲೇಖಿಸಿ ಅಜಯ್ ಮಿಶ್ರಾ ಅವರ ರಾಜೀನಾಮೆಗೂ ಆಗ್ರಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.