ಭಾರತ ತಂಡದ ಮಾಜಿ ಮತ್ತು CSK ತಂಡದ ಯಶಸ್ವಿ ಹಾಲಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಕಳೆದ ಎರಡು ವರ್ಷಗಳಿಂದ ಫಾರ್ಮ್ನಲ್ಲಿಲ್ಲ. ಹಲವು ಪಂದ್ಯಗಳಲ್ಲಿ ಧೋನಿ ಸ್ಟ್ರೈಕ್ ರೇಟ್ ವಿಮರ್ಶಕರ ಟೀಕೆಗೆ ಗುರಿಯಾಗಿತ್ತು. ಅಲ್ಲದೆ, ಕಳೆದ ವರ್ಷ ಇಡೀ ಸಿಎಸ್ಕೆ ತಂಡ ಕಳಪೆ ಫಾರ್ಮ್ನಲ್ಲಿದ್ದ ಕಾರಣ ಪ್ಲೇ ಆಫ್ಗೆ (IPL Play Off) ಸಹ ತಂಡ ಅವಕಾಶ ಪಡೆಯಲು ಸಾಧ್ಯವಾಗಿರಲಿಲ್ಲ. ಮೂರು ಭಾರಿಯ ಐಪಿಎಲ್ (IPL 2021) ಪ್ರಶಸ್ತಿ ವಿಜೇತ ತಂಡ ಕಳೆದ ವರ್ಷ ಮೊದಲ ಬಾರಿಗೆ ಪ್ಲೇ ಆಫ್ಗೆ ಸಹ ಅವಕಾಶ ಪಡೆಯದೆ ಇದ್ದದ್ದು ಹಲವರಿಗೆ ನಿರಾಸೆಯನ್ನು ಮೂಡಿಸಿದ್ದು ಸುಳ್ಳಲ್ಲ.
ಆದರೆ, ಈ ವರ್ಷ ಸಿಎಸ್ಕೆ (CSK) ತಂಡ ಮತ್ತೆ ಫಾರ್ಮ್ಗೆ ಮರಳಿದೆ. ಎಲ್ಲರ ಅದ್ಭುತ ಪ್ರದರ್ಶನದಿಂದಾಗಿ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದೆ. ಅಲ್ಲದೆ, ಕೊನೆಯ ನಾಲ್ಕು ಎಸೆತಗಳಲ್ಲಿ ನಾಯಕ ಎಂ.ಎಸ್. ಧೋನಿ ಸತತವಾಗಿ ಸಿಕ್ಸ್ ಮತ್ತು ಮೂರು ಬೌಂಡರಿ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿ ಸ್ವತಃ ಫಾರ್ಮ್ಗೆ ಮರಳಿರುವುದು ಅಭಿಮಾನಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ.
ಭಾನುವಾರ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತ್ತು. ಪೃಥ್ವಿ ಶಾ, ರಿಷಭ್ ಪಂತ್ ಮತ್ತು ಶಿಮ್ರಾನ್ ಹೆಟ್ಮೆಯರ್ ಬ್ಯಾಟಿಂಗ್ ಸಹಾಯದಿಂದ ಡೆಲ್ಲಿ 172 ರನ್ ಗಳಿಸಿತ್ತು. 173 ರನ್ಗಳ ಸವಾಲಿನ ಮೊತ್ತ ಬೆನ್ನಟ್ಟಿದ್ದ ಸಿಎಸ್ಕೆ ಪಾಲಿಗೆ ಕೊನೆಯ ಓವರ್ಗಳಲ್ಲಿ ಮತ್ತೆ ಅಪದ್ಭಾಂದವ ಆಟ ಆಡಿದವರು ಎಂ.ಎಸ್. ಧೋನಿ.