ಬೆಂಗಳೂರು(ಅ.09): ರಾಜ್ಯದಲ್ಲಿ ಉಪ ಚುನಾವಣಾ(Karnataka Bypoll) ಕಣ ರಂಗೇರಿದೆ. ಎಲ್ಲ ರಾಜಕೀಯ ಪಕ್ಷಗಳು(Political parties) ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಗೆಲುವು ತಮ್ಮದಾಗಿಸಿಕೊಳ್ಳಲು ನಾನಾ ಕಸರತ್ತು ನಡೆಸುತ್ತಿದ್ದಾರೆ. ಇದರಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್(Regional Party JDS) ಹಿಂದೆ ಬಿದ್ದಿಲ್ಲ.
ಖುದ್ದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರೇ(HD Devegowda) ಈ ವಯಸ್ಸಿನಲ್ಲೂ ಸಿಂದಗಿ(Sindagi)ಯಲ್ಲಿ ಮೊಕ್ಕಾಂ ಹೂಡಲಿದ್ದಾರೆ. ಮಾತ್ರವಲ್ಲ ಅವರ ಮೊಮ್ಮಗ ಹಾಸನ ಸಂಸದ ಪ್ರಜ್ವಲ್ ರೇವಣ್ಣ(MP Prajwal Revanna) ಕೂಡ ಸಿಂದಗಿಯಲ್ಲೇ ಪ್ರಚಾರಕ್ಕಾಗಿ ವಾಸ್ತವ್ಯ ಹೂಡಲಿದ್ದಾರೆ. ಇದರ ಮೂಲಕ ತಾತ ಮೊಮ್ಮಗನ ಜೋಡಿ ಸಿಂದಗಿಯಲ್ಲಿ ಮೋಡಿ ಮಾಡ್ತಾರಾ ಎನ್ನುವ ಚರ್ಚೆ ಹುಟ್ಟಿದಂತಾಗಿದೆ.
ಹಾನಗಲ್‌ಗಿಂತ ಸಿಂದಗಿಯಲ್ಲೇ ಹೆಚ್ಚು ಪ್ರಚಾರ ಮಾಡಲಿರುವ ಹೆಚ್.ಡಿ.ದೇವೇಗೌಡರು, ಅಲ್ಲಿಯೇ ತಂಗಲು ನಿರ್ಧರಿಸಿದ್ದಾರೆ. ಹಳ್ಳಿ ಹಳ್ಳಿಗಳಿಗೂ ಪ್ರವಾಸ ಮಾಡುತ್ತೇನೆ ಎಂದು ಅವರೇ ಹೇಳಿಕೊಂಡಿದ್ದಾರೆ. ಇನ್ನೊಂದೆಡೆ ಪ್ರಜ್ವಲ್ ರೇವಣ್ಣ ಕೂಡ ಅಕ್ಟೋಬರ್ 15 ರಿಂದ ಸಿಂದಗಿಯಲ್ಲೇ ಉಳಿದು, ಚುನಾವಣೆ ಮುಗಿಸಿಯೇ ಬರಲು ನಿರ್ಧರಿಸಿದ್ದಾರೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಎಲ್ಲ ನಾಯಕರು ಆಗಾಗ್ಗೆ ಪ್ರಚಾರಕ್ಕೆ ಬಂದರೂ, ಹೆಚ್.ಡಿ.ದೇವೇಗೌಡ-ಪ್ರಜ್ವಲ್ ರೇವಣ್ಣ ಮೇಲೆಯೇ ಸಿಂದಗಿ ಜವಾಬ್ದಾರಿ ವಹಿಸಲಿದ್ದಾರೆ.