ಕೊಡಗು: ಸಮಾಜದಲ್ಲಿ ಯಾವುದೇ ಅವಘಡಗಳು ಸಂಭವಿಸಿದ್ದರೂ ರಕ್ಷಣೆಗೆ ಮೊದಲು ಪೊಲೀಸರು ಮುಂದಾಗುತ್ತಾರೆ. ಆದರೆ ಇಲ್ಲಿ ಪೊಲೀಸರಿಗೆ ಸರಿಯಾದ ರಕ್ಷಣೆ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಹೌದು ಇಂತಹ ಸ್ಥಿತಿ ಇರೋದು ಬೇರೆಲ್ಲೂ ಅಲ್ಲ ಕೊಡಗಿನ ಕುಶಾಲನಗರದಲ್ಲಿ (Kushalanagara). ಕುಶಾಲನಗರ ಕೊಡಗಿನ ವಾಣಿಜ್ಯ ಪಟ್ಟಣವಾಗಿದ್ದು, ಈಗ ಇದು ತಾಲ್ಲೂಕು ಕೇಂದ್ರವಾಗಿಯೂ ಮೇಲ್ದರ್ಜೆಗೆ ಏರಿದೆ.
ಇಲ್ಲಿ ಡೆವೈಎಸ್ ಪಿ ಕಚೇರಿ, ಇನ್ಸ್‌ಪೆಕ್ಟರ್ ಕಚೇರಿ, ನಗರ ಪೊಲೀಸ್ ಠಾಣೆ ಮತ್ತು ಗ್ರಾಮಾಂತರ ಪೊಲೀಸ್ ಠಾಣೆ ಜೊತೆಗೆ ಸಂಚಾರಿ ಪೊಲೀಸ್ ಠಾಣೆಯೂ ಇದೆ. ಈ ಎಲ್ಲಾ ಠಾಣೆಗಳಲ್ಲಿ ನೂರಾರು ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಬಹುತೇಕ ಸಿಬ್ಬಂದಿಗೆ ವಾಸ್ತವ್ಯ ಮಾಡೋದಕ್ಕೆ ಸುಸಜ್ಜಿತವಾದ ವಸತಿ ಗೃಹಗಳ ವ್ಯವಸ್ಥೆ ಇಲ್ಲ (Police Quarters). ಇರುವ ವಸತಿ ಗೃಹಗಳು 35 ರಿಂದ 40 ವರ್ಷಗಳ ಹಿಂದಿನ ಹಳೆಯ ಕಟ್ಟಡಗಳು.
ಈ ಕಟ್ಟಡಗಳೆಲ್ಲವೂ ಬಹುತೇಕ ಶಿಥಿಲಾವಸ್ಥೆ ತಲುಪಿದ್ದು, ಕಟ್ಟಡಗಳ ಮೇಲೆ ಸಂಪೂರ್ಣ ಕಾಡು ಬೆಳೆದುಕೊಂಡಿದೆ. ಹೀಗಾಗಿ ಇಡೀ ಕಟ್ಟಡಗಳೂ ಭೂತ ಬಂಗಲೆಯಂತೆ ಆಗಿವೆ. ಹಂಚುಗಳೆಲ್ಲಾ ಹೊಡೆದು ಹೋಗಿ, ಕಿಟಕಿ ಬಾಗಿಲುಗಳೆಲ್ಲಾ ಮುರಿದುಹೋಗಿದ್ದರಿಂದ ಈ ಹಿಂದೆ ಅವುಗಳಲ್ಲಿ ವಾಸವಾಗಿದ್ದ ಸಿಬ್ಬಂದಿ ಖಾಲಿ ಮಾಡಿ ಬೇರೆಡೆಗೆ ಹೋಗಿ ಬಾಡಿಗೆ ಮನೆಗಳಲ್ಲಿ ಇದ್ದು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಆದರೆ ಬೇರೆ ದಾರಿಯಿಲ್ಲದೆ ಇದೇ ಹಳೆಯದಾದ ಮೂರು ಕಟ್ಟಡಗಳಲ್ಲಿ ಇಂದಿಗೂ ಮೂರು ಪೊಲೀಸ್ ಸಿಬ್ಬಂದಿಗಳ ಕುಟುಂಬಗಳು ಬದುಕುತ್ತಿವೆ. ಅವುಗಳಲ್ಲಿ ಹಂಚುಗಳೆಲ್ಲಾ ಹೊಡೆದು ಹೋಗಿ ಮಳೆಗಾಲ ಬಂತೆಂದರೆ ಇಡೀೀ ಮನೆಗೆ ನೀರು ತುಂಬಿಕೊಂಡು ಬದುಕೋದೆ ದುಸ್ಥರವಾಗಿದೆ. ಅಲ್ಲದೆ ಗೋಡೆಗಳು ಬಿರುಕು ಬಿಟ್ಟಿರುವುದರಿಂದ ಯಾವಾಗ ಅನಾಹುತಗಳು ಸಂಭವಿಸುತ್ತದೆಯೋ ಎಂದು ಜೀವ ಭಯದಲ್ಲೇ ಬದುಕುವಂತಾಗಿದೆ.