ಕೊರೊನಾಘಾತಕ್ಕೆ ಆಹ್ವಾನ ಕೊಟ್ರಾ ಕೈ ನಾಯಕರು..?
ನಾವು ನೀರು ತಂದೇ ತರ್ತೀವಿ ಅಂತಾ ಸಾವಿರಾರು ಜನರನ್ನು ಒಗ್ಗೂಡಿಸಿಕೊಂಡು ಪಾದಯಾತ್ರೆಗೆ ಹೊರಟ ಕಾಂಗ್ರೆಸ್ ನಾಯಕರು ಮುಂದಾಗುವ ಕೊರೊನಾಘಾತಕ್ಕೆ ಆಹ್ವಾನ ಕೊಟ್ಟರಾ ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.
ರಾಜ್ಯದಲ್ಲಿ ಒಂದೆಡೆ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಸಕಲ ಸಿದ್ಧತೆಯಾದ್ರೆ, ಇನ್ನೊಂದೆಡೆ ಕೊರೊನಾ ಆರ್ಭಟ ಕೂಡ ಹೆಚ್ಚಾಗುತ್ತಾ ಬಂತು. ಹೀಗಾಗಿ ರಾಜ್ಯ ಸರ್ಕಾರ ಟಫ್ ರೂಲ್ಸ್ ಅದೇಶ ಹೊರಡಿಸಿ ವಿಕೇಂಡ್ ಕರ್ಫ್ಯೂ ಕೂಡ ಜಾರಿ ಮಾಡಿತ್ತು. ಆದರೆ ಕೈ ನಾಯಕರು ಅದ್ಯಾವುದಕ್ಕೂ ಕ್ಯಾರೇ ಎನ್ನದೇ ಜನವರಿ 9ರಂದು ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಚಾಲನೆ ಕೊಟ್ಟರು. ನಾಲ್ಕು ದಿನಗಳ ಕಾಲ ಪಾದಯಾತ್ರೆ ನಡೆಸಿದ್ದ ಕಾಂಗ್ರೆಸ್ ನಾಯಕರಿಗೆ ಸರ್ಕಾರ ಮತ್ತೆ ಚಾಟಿ ಬೀಸಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ನಡೆಸುತ್ತಿರುವ ನಿಮ್ಮ ಪಾದಯಾತ್ರೆಯನ್ನು ಈ ಕೂಡಲೇ ರದ್ದು ಮಾಡಿ ಅಂತಾ ಆದೇಶ ಹೊರಟಿಸಿತ್ತು.
ಸರ್ಕಾರದ ಒತ್ತಾಯ, ಹೈ ಕಮಾಂಡ್ ನಿರ್ಧಾರ ಅಂತೂ ನಮ್ಮ ರಾಜ್ಯ ಕಾಂಗ್ರೆಸ್ ನಾಯಕರು ಪಾದಯಾತ್ರೆಗೆ ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ. ಇನ್ನು ಕೊರೊನಾ ಇಳಿಮುಖವಾಗುತ್ತಿದ್ದಂತೆ ತಮ್ಮ ಪಾದಯಾತ್ರೆ ಮುಂದುವರಿಸುವುದಾಗಿ ನಿರ್ಧಾರ ಮಾಡಿದ್ದಾರೆ.
ಪಾದಯಾತ್ರೆಯಿಂದ ಕೊರೊನಾ ಹೆಚ್ಚಳ
ಕಾಂಗ್ರೆಸ್ ಪಾದಯಾತ್ರೆಯ ಚಾಲನೆ ಕೊಟ್ಟ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಜೊತೆಗೆ ಮ್ಯಾಂಗೋ ಬೋರ್ಡ್ ಅಧ್ಯಕ್ಷೆ ಕಮಲಾಕ್ಷಿ ರಾಜಣ್ಣ ಹಾಗೂ ಮಂಜುಳಾ ಮಾನಸ ಅವರಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಇತ್ತ ಪಾದಯಾತ್ರೆ ಮೊದಲ ದಿನವೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಜ್ವರ ಕಾಣಿಸಿಕೊಂಡಿದ್ದು, ವಿಶ್ರಾಂತಿ ಬಳಿಕ ಮತ್ತೆ ಅವರು ಪಾದಯಾತ್ರೆಯಲ್ಲಿ ಭಾಗಿಯಾದರು. ಕಾಂಗ್ರೆಸ್ ಶಾಸಕ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೂ ಜ್ವರ ಕಾಣಿಸಿಕೊಂಡಿದ್ದು, ಅವರು ಕಳೆದ ಎರಡು ದಿನಗಳಿಂದ ಪಾದಯಾತ್ರೆಯಲ್ಲಿ ಭಾಗಿಯಾಗರಲಿಲ್ಲ.ಅಲ್ಲದೆ ಪಾದಯಾತ್ರೆ ವೇಳೆ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದ ಎಡಿಸಿ ಜವರೇಗೌಡ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಸದ್ಯ ಇದೆಲ್ಲಾ ಪ್ರಚಲಿತಕ್ಕೆ ಬಂದ ವಿಚಾರಗಳು.
ಕಳೆದ ಎರಡು ವರ್ಷಗಳಿಂದ ತತ್ತರಿಸಿರುವ ರಾಜ್ಯದ ಪರಿಸ್ಥಿತಿ ಕಾಂಗ್ರೆಸ್ ನಾಯಕರ ಗಮನದಲ್ಲಿದ್ದು ಕೂಡ ದಿನಕ್ಕೆ ಹತ್ತು ಸಾವಿರ, ಐದು ಸಾವಿರ ಕಾರ್ಯಕರ್ತರನ್ನು ಒಗ್ಗೂಡಿಸುವ ಮೊದಲು ಈ ಬಗ್ಗೆ ಯೋಚಿಸದ ಜನಪ್ರತಿನಿಧಿಗಳ ಬುದ್ಧಿವಂತಿಕೆಗೆ ಏನು ಹೇಳಬೇಕೋ..?