ಕೊಡಗು: ಮಡಿಕೇರಿ ಶಕ್ತಿ ದೇವತೆಗಳ ಕರಗಗಳ ಉತ್ಸವಕ್ಕೆ (Karaga Utsava) ಚಾಲನೆ ನೀಡುವ ಮೂಲಕ ಮಡಿಕೇರಿ ದಸರಾಕ್ಕೆ ವಿದ್ಯುಕ್ತ ಚಾಲನೆ (Madikeri Dasara Inaugurated) ದೊರೆತ್ತಿದೆ. ಮಡಿಕೇರಿ ನಗರದ ಪಂಪಿನ ಕೆರೆ ಬಳಿಯಿಂದ ಎಂಎಲ್ ಸಿ ಗಳಾದ ಸುನಿಲ್ ಸುಬ್ರಹ್ಮಣಿ ಮತ್ತು ವೀಣಾ ಅಚ್ಚಯ್ಯ ಅವರು ಪೂಜೆ ಸಲ್ಲಿಸುವ ಮೂಲಕ ಕರಗ ಉತ್ಸವಕ್ಕೆ ಚಾಲನೆ ನೀಡಿದರು.
ನಗರದ ಶಕ್ತಿ ದೇವತೆಗಳಾದ ದಂಡಿನ ಮಾರಿಯಮ್ಮ, ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಕೋಟೆ ಮಾರಿಯಮ್ಮ ಮತ್ತು ಕಂಚಿ ಕಾಮಾಕ್ಷಿ, ದೇವತೆಗಳ ಕರಗಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಬನ್ನಿ ಮಂಟಪ ಮಾರ್ಗದ ಮೂಲಕ ಹೊರಟ ಕರಗ ಉತ್ಸವ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ಆಯಾ ದೇವಾಲಯಗಳಿಗೆ ತೆರಳಿತು.
ಕೋವಿಡ್ ಹಿನ್ನೆಲೆಯಲ್ಲಿ ಪ್ರತೀ ದೇವರ ಕರಗದ ಜೊತೆಗೆ ಕೇವಲ 25 ಜನರು ಇರುವಂತೆ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದರು. ಆದರೆ ಜನರು ಮಾತ್ರ ಅದನ್ನು ಪಾಲಿಸದೆ ನೂರಾರು ಸಂಖ್ಯೆಯಲ್ಲಿ ಸೇರಿದ್ದು ವಿಪರ್ಯಾಸ. ಇನ್ನು ನಾಳೆಯಿಂದ ನಾಲ್ಕು ಶಕ್ತಿ ದೇವತೆಗಳ ಕರಗಗಳು ಮಡಿಕೇರಿ ನಗರವನ್ನು ಪ್ರದಕ್ಷಿಣೆ ಹಾಕಲಿವೆ. ಕರಗಗಳು ಪ್ರತೀ ಮನೆ ಮನೆಗೂ ತೆರಳಲಿವೆ. ಈ ವೇಳೆ ಪ್ರತೀ ದೇವತೆಗಳ ಕರಗದ ಜೊತೆಗೆ ಕೇವಲ 10 ಜನರು ಮಾತ್ರವೇ ಇರುವಂತೆ ಜಿಲ್ಲಾಡಳಿತ ಸೂಚಿಸಿದ್ದು, ಅದನ್ನಾದರೂ ಭಕ್ತರು ಪಾಲನೆ ಮಾಡುತ್ತಾರಾ ಎನ್ನೋದನ್ನು ಕಾದು ನೋಡಬೇಕು.