ನವ ದೆಹಲಿ (ಅಕ್ಟೋಬರ್ 07): ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಕಾರು ಹರಿಸಿರುವ ಉತ್ತರ ಪ್ರದೇಶದ ಲಖಿಂಪುರ್ ಖೇರಿ ಹಿಂಸಾಚಾರ (Lakhimpur Kheri Violence ) ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ಸರ್ವೋಚ್ಚ ನ್ಯಾಯಾಲಯವು (Supreme Court) ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು ಅದರ ವಿಚಾರಣೆ ಇಂದು ನಡೆಯಲಿದೆ. ಲಖೀಂಪುರ್ ಖೇರಿಯಲ್ಲಿ ರೈತರು ಶಾಂತಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು.
ಆಗ ಕೇಂದ್ರ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ಅಜಯ್ ಮಿಶ್ರಾ (Union Home Minister (MoS) Ajay Mishra) ಮತ್ತು ಅವರ ಪುತ್ರ ಆಶೀಶ್ ಮಿಶ್ರಾ (Ashish Mishra) ಅವರು ರೈತರ ಮೇಲೆ ಕಾರು ಚಲಾಯಿಸಿದ್ದಾರೆ. ಇದರಿಂದ ನಾಲ್ವರು ರೈತರು ಮೃತಪಟ್ಟಿದ್ದಾರೆ. ಬಳಿಕ ರೈತರು ಆಕ್ರೋಶಭರಿತ ರಾಗಿದ್ದಾರೆ. ಆಗ ನಡೆದ ಹಿಂಸಾಚಾರದಲ್ಲಿ ನಾಲ್ವರು ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ. ಅಲ್ಲದೆ ಘಟನೆಯನ್ನು ವರದಿ ಮಾಡಲು ಹೋಗಿದ್ದ ಪತ್ರಕರ್ತನೊಬ್ಬ ಬಲಿ ಆಗಿದ್ದಾನೆ ಎನ್ನಲಾಗಿದೆ.
ಉತ್ತರ ಪ್ರದೇಶದಲ್ಲಿ (Uttar Pradesh) ಇತ್ತೀಚೆಗೆ ಬಿಜೆಪಿ ಶಾಸಕನೇ ರೂವಾರಿ ಎನ್ನಲಾದ ಹಾತ್ರಾಸ್ ಅತ್ಯಾಚಾರ ಘಟನೆ (Hathras Rape Incident) ನಡೆದಾಗಲೂ ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು. ಆಗ ಅಲಹಾಬಾದ್ ಹೈಕೋರ್ಟ್ (Allahabad High Court) ಸ್ವಯ ಪ್ರೇರಿತ ದೂರು ದಾಖಲಿಸಿಕೊಂಡು ಉತ್ತರ ಪ್ರದೇಶ ಸರ್ಕಾರಕ್ಕೆ ಚಾಟಿ ಬೀಸಿತ್ತು. ಈಗ ಲಖೀಂಪುರ್ ಖೇರಿಯಲ್ಲಿ ನಡೆದ ಮಾರಣಹೋಮದ ಬಗ್ಗೆ ದೇಶಾದ್ಯಂತ ವ್ಯಾಪಕ ಚರ್ಚೆ ಆಗುತ್ತಿದೆ. ಈ ಘಟನೆಯಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಮತ್ತು ಅವರ ಪುತ್ರ ಆಶೀಶ್ ಮಿಶ್ರಾ ಪಾತ್ರ ಇರುವ ಬಗ್ಗೆ ಚರ್ಚೆ ಆಗುತ್ತಿದೆ.