ಲಕ್ನೋ (ಅಕ್ಟೋಬರ್ 07); ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಬುಧವಾರ ಅನವಶ್ಯಕವಾಗಿ ಲಕ್ನೋ ವಿಮಾನ (Lucknow) ನಿಲ್ದಾಣದಲ್ಲಿ ಭಲೇ ನಾಟಕವನ್ನೇ ನಡೆಸಿದ್ದಾರೆ ಎಂದು ಉತ್ತರಪ್ರದೇಶದ ಸಚಿವ ಸಿದ್ದಾರ್ಥ್ ನಾಥ್ ಸಿಂಗ್ (Sidharth Nath Singh) ಕಿಡಿಕಾರಿದ್ದಾರೆ. ಲಖೀಂಪುರ್ ಖೇರಿ (Lakhimpur Kheri) ಹಿಂಸಾಚಾರದಲ್ಲಿ ಮೃತಪಟ್ಟ ರೈತರ ಮನೆಗಳಿಗೆ ಭೇಟಿ ನೀಡುವ ಸಲುವಾಗಿ ಸೋಮವಾರವೇ ಪ್ರಿಯಾಂಕಾ ಗಾಂಧಿ ಲಖೀಂಪುರ್ ಖೇರಿಗೆ ತಲುಪಿದ್ದರು.
ಆದರೆ, ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಬಂಧಿಸಿ ಗೆಸ್ಟ್ಹೌಸ್ನಲ್ಲಿ ಗೃಹ ಬಂಧನದಲ್ಲಿ ಇಡಲಾಗಿತ್ತು. ಹೀಗಾಗಿ ನಿನ್ನೆ ರಾಹುಲ್ ಗಾಂಧಿ, ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಮತ್ತು ಛತ್ತೀಸ್‌ಗಢದ ಸಿಎಂ ಭೂಪೇಶ್ ಬಘೇಲ್ ಉತ್ತರ ಪ್ರದೇಶಕ್ಕೆ ಆಗಮಿಸಿದ್ದರು. ಆದರೆ, ಅವರಿಗೆ ಲಖೀಂಪುರ್ ಕೇರಿ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ. ಹೀಗಾಗಿ ರಾಹುಲ್ ಗಾಂಧಿ ವಿಮಾನ ನಿಲ್ದಾಣದಲ್ಲೇ ಧರಣಿ ಆರಂಭಿಸಿದ್ದರು. ಈ ವಿಚಾರ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿತ್ತು.