ಬಾಲಿವುಡ್ ನಟಿ ರಾಣಿ ಮುಖರ್ಜಿ (Rani mukerji ) ಸಾಕಷ್ಟು ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಗ್ಲಾಮರಸ್ ಪಾತ್ರಗಳ ಜತೆಗೆ ಅವರು ಮಹಿಳಾ ಪ್ರಧಾನ ಸಿನಿಮಾಗಳಲ್ಲೂ ನಟಿಸಿದ್ದಾರೆ. ಬಾಲಿವುಡ್ಗೆ ಕಾಲಿಟ್ಟ ಆರಂಭದ ದಿನಗಳು ರಾಣಿ ಅವರ ಕೈ ಹಿಡಿಯಲಿಲ್ಲವಾದರೂ ನಂತರದಲ್ಲಿ ರಾಣಿ ಅವರ ಅದೃಷ್ಟ ಖುಲಾಯಿಸಿತು. ಸಹಜವಾದ ನಟನೆ, ವಿಭಿನ್ನವಾದ ಧ್ವನಿ ಎಲ್ಲವೂ ರಾಣಿ ಮುಖರ್ಜಿಗೆ ಒಂದು ರೀತಿ ಪ್ಲಸ್ ಪಾಯಿಂಟ್ ಆಗಿತ್ತು.
ಈ ನಟಿ 7 ಸಲ ಫಿಲ್ಮ್ಫೇರ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಅಮೀರ್ ಖಾನ್ ಜತೆ ಗುಲಾಮ್ (Ghulam), ಶಾರುಖ್ ಖಾನ್ ಜತೆ ಕುಚ್ ಕುಚ್ ಹೋತಾ ಹೈ (Kuch Kuch Hota Hai), ಕಭಿ ಕುಷಿ ಕಭಿ ಗಮ್ ಸಿನಿಮಾಗಳ ಜೊತೆಗೆ ವಿಭಿನ್ನವಾದ ಜಾನರ್ ಇರುವ ಚಿತ್ರಗಳಲ್ಲಿ ನಟಿಸಿದ್ದಾರೆ. ಸಾಮಾಜಿಕ ಜಾಲತಾಣದಿದ ದೂರ ಇರುವ ರಾಣಿ ಮುಖರ್ಜಿ ತಮ್ಮ ವೈಯಕ್ತಿಕ ಜೀವನದಲ್ಲಿ ತುಂಬಾ ಸಿಂಪಲ್ಲಾಗಿರಲು ಬಯಸುತ್ತಾರಂತೆ.
ಮರ್ದಾನಿ ಸಿನಿಮಾ ಖ್ಯಾತಿಯ ನಟಿ ರಾಣಿ ಮುಖರ್ಜಿ ಹೆಚ್ಚಿರುವ ದೇಹದ ತೂಕದಿಂದಾಗಿ ಸಾಕಷ್ಟು ಸಲ ಟ್ರೋಲ್ ಆಗಿದ್ದಾರೆ. ಫ್ಯಾಷನ್ ವಿಷಯದಲ್ಲೂ ಅಷ್ಟಾಗಿ ಆಸಕ್ತಿ ತೋರದ ಈ ನಟಿ ದೇಹದ ತೂಕ ಇಳಿಸಿಕೊಳ್ಳುವ ಹಾಗೂ ಫಿಟ್ನೆಸ್ ಕುರಿತಾಗಿ ಆಸಕ್ತಿಕರ ಹೇಳಿಕೆ ನೀಡಿದ್ದಾರೆ. ಹೌದು, ಕೆಲವೊಮ್ಮೆ ನನಗೆ ನನಗಿಂತ ನನ್ನ ದೇಹದ ತೂಕವೇ ಹೆಚ್ಚು ಫೇಮಸ್ ಆಗಿದೆ ಎಂದೆನಿಸುತ್ತದೆ ಎಂದಿದ್ದಾರೆ.