3-4 ವರ್ಷಗಳಲ್ಲಿ ಲೋಕಾರ್ಪಣೆಗೊಳ್ಳಲಿವೆ ನಾಲ್ಕು ಹೊಸ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳು..!
ರಾಜ್ಯದಲ್ಲೀಗ ವಿಮಾನ ನಿಲ್ದಾಣಗಳದ್ದೇ ಸುಗ್ಗಿ. ಒಂದರ ಹಿಂದೆ ಒಂದರಂತೆ ಹೊಸ ಏರ್‌ಪೋರ್ಟ್‌ಗಳು ರೆಡಿಯಾಗುತ್ತಲೇ ಇವೆ. ಕರ್ನಾಟಕದ ಎರಡನೇ ಹಂತದ ನಗರಗಳಲ್ಲಿ ಹೂಡಿಕೆ ಅವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ಶಿವಮೊಗ್ಗ, ವಿಜಯಪುರ, ಹಾಸನ ಮತ್ತು ರಾಯಚೂರಿನಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಗಳನ್ನು (Greenfield Airport) ಪ್ರಸ್ತಾಪಿಸಿದ ಒಂದು ದಶಕದ ನಂತರ, ಯೋಜನೆಗಳು ವಾಸ್ತವಕ್ಕೆ ಹತ್ತಿರವಾಗಿವೆ.
ಭೂಸ್ವಾಧೀನ ಸಮಸ್ಯೆಗಳು ಮತ್ತು ಏರ್‌ಪೋರ್ಟ್ ಆಥಾರಿಟಿ ಆಫ್ ಇಂಡಿಯಾ (AAI) ಕ್ಲಿಯರೆನ್ಸ್‌ಗಳ ವಿಳಂಬದಿಂದಾಗಿ ಕಳೆದ ಎರಡು ವರ್ಷಗಳ ಹಿಂದೆ ತಡವಾಗಿ ಕಲಬುರಗಿ ಮತ್ತು ಬೀದರ್ ವಿಮಾನ ನಿಲ್ದಾಣಗಳು ಆರಂಭವಾದವು. ಈಗ ಇನ್ನು 3 – 4 ವರ್ಷಗಳಲ್ಲಿ ರಾಜ್ಯದಲ್ಲಿ 4 ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳನ್ನು ನೋಡುವ ಸಾಧ್ಯತೆ ಇದೆ. ವಿಮಾನಗಳ ಲ್ಯಾಂಡಿಂಗ್ ಹಾಗೂ ಟೇಕಾಫ್ ಸಹ ಆರಂಭವಾಗಲಿದೆ ಎಂದು ಸರ್ಕಾರಿ ಮೂಲಗಳು ಹೇಳುತ್ತವೆ.
ಶಿವಮೊಗ್ಗ ವಿಮಾನ ನಿಲ್ದಾಣದ ಕಾರ್ಯ ಈಗಾಗಲೇ ಶೇ. 45ರಷ್ಟು ಮುಗಿದಿದ್ದರೆ, ಹಾಸನ ಮತ್ತು ರಾಯಚೂರು ಏರ್‌ಪೋರ್ಟ್‌ಗಳ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರನ್ ವೇ ಕೆಲಸ ಭಾಗಶಃ ಪೂರ್ಣಗೊಂಡಿದೆ. ಸಮೀಪದ ರಸ್ತೆಗಳು, ಪಾರ್ಕಿಂಗ್ ಪ್ರದೇಶ, ಆಂತರಿಕ ಮತ್ತು ಬಾಹ್ಯ ರಸ್ತೆ, ಕಾಂಪೌಂಡ್ ವಾಲ್, ಪ್ಯಾಸೆಂಜರ್ ಟರ್ಮಿನಲ್ ಕಟ್ಟಡ, ವಾಚ್ ಟವರ್ ಮತ್ತು CFR ಕಟ್ಟಡಗಳ ಕಾರ್ಯ ಪ್ರಗತಿಯಲ್ಲಿವೆ.