ಬಿಜೆಪಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ ನಿಂದ ಪಂಜಿನ ಮೆರವಣಿಗೆ: ರೈತರ ಹತ್ಯೆ, ಪ್ರಿಯಾಂಕಾ ಗಾಂಧಿ ಬಂಧನ..!
ಬೆಂಗಳೂರು: ಉತ್ತರಪ್ರದೇಶದ ಲಖೀಂಪುರ್ (Lakhimpur Violence) ರೈತ ಹೋರಾಟ (Farmers Protest) ಭಾನುವಾರ ಸಂಜೆ ಹೊತ್ತಿಗೆ ಗಲಭೆಗೆ ಕಾರಣವಾಗಿತ್ತು. ಕೇಂದ್ರ ಸಚಿವ ಅಜಯ್ ಮಿಶ್ರಾ (Ajay Mishra) ಅವರ ಮಗ ಆಶೀಶ್ ಮಿಶ್ರಾ (Asish Mishra) ಪ್ರತಿಭಟನಾ ನಿರತ ರೈತರ ಮೇಲೆ ಕಾರ್ ಚಲಾಯಿಸಿದ್ದರು. ಈ ಘಟನೆಯಲ್ಲಿ 4 ಜನ ರೈತರು ಮೃತಪಟ್ಟಿದ್ದಾರು. ನಂತರ ನಡೆದ ಗಲಭೆಯಲ್ಲಿ ಒಟ್ಟು 5 ಜನ ಸಾವಿಗೀಡಾಗಿದ್ದರು.
ಹೀಗಾಗಿ ಸೋಮವಾರ ಲಖೀಂಪುರ್ನಲ್ಲಿ ಭಾರೀ ಹಿಂಸಾಚಾರ ಭುಗಿಲೆದ್ದಿತ್ತು. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಲು ಆಗಮಿಸಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ (Priyanka Gandhi) ಅವರನ್ನೂ ಬಂಧಿಸಲಾಗಿತ್ತು. ಈ ಘಟನೆಗೆ ರಾಷ್ಟ್ರಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಅಲ್ಲದೆ, ಉತ್ತರಪ್ರದೇಶದ ಈ ನಡೆಗೆ ಆಕ್ರೋಶ ಹೊರಹಾಕಿರುವ ರಾಜ್ಯ ಕಾಂಗ್ರೆಸ್ (KPCC) ಘಟಕ ಸೋಮವಾರ ಪಂಜಿನ ಮೆರವಣಿಗೆ ನಡೆಸುವ ಮೂಲಕ ಬಿಜೆಪಿ ವಿರುದ್ಧ ತನ್ನ ಪ್ರತಿಭಟನೆಯನ್ನು ದಾಖಲಿಸಿದೆ.
ಮೆರವಣಿಗೆ ನಂತರ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ನಿಯೋಗದಲ್ಲಿ ಭೇಟಿ ಮಾಡಿ, ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿರುವ ಕಾಂಗ್ರೆಸ್, “ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಇದೇ ಮೊದಲ ಬಾರಿಗೆ ದೇಶದ ಅನ್ನದಾತನಲ್ಲಿ ಅನಾಥ ಪ್ರಜ್ಞೆ ಕಾಡುವಂತಾಗಿದೆ. ರೈತ ವಿರೋಧಿ ಬಿಜೆಪಿ ಸರ್ಕಾರ ತನ್ನ ವಿರುದ್ಧ ಧ್ವನಿ ಎತ್ತುತ್ತಿರುವ ರೈತರ ಉಸಿರನ್ನೇ ಅಡಗಿಸಿದೆ” ಎಂದು ಆರೋಪಿಸಿದೆ.