ಕೇರಳ ಮಾದರಿಯಲ್ಲಿ ಕೊರೋನಾ ಸೋಂಕು ಸ್ಪೋಟದ ಎಚ್ಚರಿಕೆ..! ನವರಾತ್ರಿ ಹಬ್ಬಕ್ಕೆ ಕಡಿವಾಣ ಸಾಧ್ಯತೆ?
ಬೆಂಗಳೂರು (ಅಕ್ಟೋಬರ್ 05); ಏಪ್ರಿಲ್-ಮೇ ನಲ್ಲಿ ದೇಶದಾದ್ಯಂತ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಹರಡಿದ್ದರೂ ಸಹ ಜೂನ್-ಜುಲೈ ವೇಳೆಗೆ ತಹಬಂದಿಗೆ ಬಂದಿತ್ತು. ಆದರೆ, ಕೇರಳ ಸರ್ಕಾರ 10 ದಿನಗಳ ಓನಂ ಹಬ್ಬದ ಆಚರಣೆಗಾಗಿ ಕೋವಿಡ್ ಮಾರ್ಗಸೂಚಿಯನ್ನು ಸಡಿಲಿಸಿತ್ತು. ಪರಿಣಾನ ಜನ ಹಬ್ಬದ ಸಡಗರದಲ್ಲಿ ಬೀದಿಗೆ ಇಳಿಯಲು ಶುರು ಮಾಡಿದ್ದರು. ಪರಿಣಾಮ ಕೊರೋನಾ ಸ್ಫೋಟ ಉಂಟಾಗಿತ್ತು.
ನೋಡನೋಡುತ್ತಲೇ ದಿನಕ್ಕೆ 1 ಲಕ್ಷದ ವರೆಗೆ ಸೋಂಕು ಪ್ರಕರಣಗಳು ಪತ್ತೆಯಾಗಲು ಆರಂಭಿಸಿದ್ದವು. ಪರಿಣಾಮ ದಕ್ಷಿಣ ಭಾರತದಾತ್ಯಂತ ಈ ಸೋಂಕು ಹರಡಲು ಆರಂಭಿಸಿತ್ತು. ಹೀಗಾಗಿ ರಾಜ್ಯ ಸರ್ಕಾರ ಗಣೇಶ ಚತುರ್ಥಿಗೆ ಹಲವು ಕಡಿವಾಣಗಳನ್ನು ಹೇರಿತ್ತು. ಆದರೆ, ಇದೀಗ ಗಣೇಶ ಚತುರ್ಥಿ ಬೆನ್ನಿಗೆ ನವರಾತ್ರಿ ಹಬ್ಬ ಸಹ ಬಂದಿದ್ದು, ರಾಜ್ಯ ಸರ್ಕಾರ ಈ ಹಬ್ಬಕ್ಕೂ ಕಡಿವಾಣ ಹಾಕುತ್ತಾ? ಎಂಬ ಮಾತುಗಳು ಕೇಳಿ ಬರುತ್ತಿವೆ.
ಈಗಾಗಲೇ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿವೆ. ಪರಿಣಾಮ ಕೋವಿಡ್ ಮಾರ್ಗಸೂಚಿಯಲ್ಲಿ ಹಲವು ಸಡಿಲಿಕೆಗಳನ್ನು ನೀಡಲಾಗಿದೆ. ಆದರೆ, ಕೊರೋನಾ ಕಡಿಮೆಯಾಗಿದೆ ಎಂದು ಮೈಮರೆಯುವಂತಿಲ್ಲ. ಕಡಿವಾಣ ಹಾಕದಿದ್ದರೆ ಕೇರಳ ಮಾದರಿಯಲ್ಲಿ ಸೋಂಕು ಸ್ಪೋಟಗೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹಬ್ಬ ಹರಿದಿನಗಳ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಎಚ್ಚರಿಕೆ ನೀಡಿದ್ದು, ದಸರಾ, ದೀಪಾವಳಿ, ಮಹಾಲಯ ಅಮಾವಾಸ್ಯೆಗೆ ಕಡಿವಾಣ ಅಗತ್ಯ ಎಂದಿದೆ.