ರಾಜ್ಯ

ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ: ಸಚಿವ ಜೆ.ಸಿ. ಮಾಧುಸ್ವಾಮಿ ಸಲಹೆ

ಗುಬ್ಬಿ: ‘ಕೃಷಿಕರು ತಾವು ಬೆಳೆದಿರುವ ಬೆಳೆಗೆ ಉತ್ತಮ ಬೆಲೆ ಹಾಗೂ ಮಾರುಕಟ್ಟೆ ಸಿಗುವಂತಾಗಲು ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕಿದೆ. ಸಂಶೋಧನೆ ಹಾಗೂ ಪ್ರಯೋಗಗಳು ಕೇವಲ ಪುಸ್ತಕದಲ್ಲಿ ಉಳಿದರೆ ಸಾಲದು. ಅದು ಭೂಮಿಯಲ್ಲಿ ಫಲ ನೀಡಿದರೆ ಮಾತ್ರ ಪ್ರಯೋಗ ಹಾಗೂ ಸಂಶೋಧನೆ ಮಾಡಲು ಸಾಧ್ಯವಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ಗುರುವಾರ ನಿಟ್ಟೂರು ಹೋಬಳಿಯ ತ್ಯಾಗಟೂರು ಗ್ರಾಮದಲ್ಲಿ ಸೋಲಾರ್ ಶಿಥಲೀಕರಣ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ತಾವು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ದರ ತಿಳಿದುಕೊಂಡು ಮಾರಾಟ ಮಾಡಬೇಕು. ಇಲ್ಲವಾದರೆ ಮಧ್ಯವರ್ತಿಗಳು ಹೆಚ್ಚಿನ ಲಾಭ ಪಡೆದುಕೊಂಡು ಅನ್ಯಾಯ ಮಾಡುವ ಸಾಧ್ಯತೆಯಿದೆ. ಇದರಿಂದ ಎಚ್ಚೆತ್ತುಕೊಳ್ಳಬೇಕಾದ ಅವಶ್ಯಕತೆ ಇದೆ. ತರಕಾರಿ, ಹಣ್ಣು, ಹೂವು ಹೆಚ್ಚು ದಿನ ಇಟ್ಟುಕೊಳ್ಳಲು ಸಾಧ್ಯವಾಗದೆ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗಿದೆ. ಇದರಿಂದ ರೈತರ ಬದುಕು ಅವನತಿಯತ್ತ ಸಾಗುತ್ತಿದೆ ಎಂದು ತಿಳಿಸಿದರು.

ರೈತರು ಹಾಗೂ ಗ್ರಾಹಕರು ಪ್ರಗತಿ ಕಾಣದೆ ಮಧ್ಯವರ್ತಿಗಳು ಮಾತ್ರ ಅಭಿವೃದ್ಧಿ ಹೊಂದುತ್ತಿದ್ದಾರೆ. ಇಂತಹ ಘಟಕಗಳನ್ನು ಸ್ಥಾಪನೆ ಮಾಡಿದಾಗ ರೈತರು ಬೆಳೆದಂತಹ ಸೊಪ್ಪು, ತರಕಾರಿ, ಹಣ್ಣು, ಹೂವನ್ನು ಮಾರುಕಟ್ಟೆ ಇಲ್ಲದಂತಹ ಸಂದರ್ಭದಲ್ಲಿ ಇಲ್ಲಿ ಸಂಗ್ರಹ ಮಾಡಿ ಹೆಚ್ಚಿನ ಬೆಲೆ ಬಂದಾಗ ಮಾರಾಟ ಮಾಡುವುದರಿಂದ ಸಾಕಷ್ಟು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಅಗತ್ಯವಿರುವೆಡೆ ರೈತರ ಒಕ್ಕೂಟಗಳನ್ನು ಮಾಡಿ ಆ ಭಾಗದಲ್ಲಿ ಈ ರೀತಿಯ ಘಟಕ ನಿರ್ಮಿಸಿ ಅವರಿಗೆ ಅನುಕೂಲ ಮಾಡುವಂತಹ ವ್ಯವಸ್ಥೆ ಮಾಡಲಾಗುತ್ತಿದೆ. ಸಂಗ್ರಹ ಮಾಡುವುದರ ಜೊತೆಯಲ್ಲಿ ಹಣ್ಣು ಮಾಡುವ ವ್ಯವಸ್ಥೆಯನ್ನೂ ಇದರ ಜೊತೆಯಲ್ಲಿ ಜೋಡಿಸಲಾಗಿದೆ. ಇದರಿಂದ ಬಾಳೆಹಣ್ಣು ಹಾಗೂ ಮಾವಿನ ಹಣ್ಣುಗಳನ್ನು ಯಾವುದೇ ರಾಸಾಯನಿಕ ಬಳಕೆ ಮಾಡದೆ ಹಣ್ಣು ಮಾಡಬಹುದು ಎಂದು ತಿಳಿಸಿದರು.

ಸೆಲ್ಕೋ ಸಿಇಒ ಮೋಹನ್ ಹೆಗಡೆ ಮಾತನಾಡಿ, ‘ನಮ್ಮ ಸಂಸ್ಥೆಯು ರೈತರಿಗೆ ಅನುಕೂಲವಾಗುವಂತಹ ಸಾಕಷ್ಟು ವಿಶೇಷ ಕಾರ್ಯಕ್ರಮ ರೂಪಿಸುತ್ತಿದೆ. ಸೌರಶಕ್ತಿ ಬಳಸಿಕೊಂಡು ವಿದ್ಯುಚ್ಛಕ್ತಿ ಮೇಲೆ ಇರುವಂತಹ ಒತ್ತಡ ಕಡಿಮೆ ಮಾಡುವ ಜೊತೆಗೆ ರೈತರಿಗೆ ಅನುಕೂಲವಾಗುವ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ’ ಎಂದು ತಿಳಿಸಿದರು.

ಹೇಮಾವತಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿಯ ನಿರ್ದೇಶಕ ಕಿಡಿಗಣ್ಣಪ್ಪ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸೆಲ್ಕೋ ಅಧ್ಯಕ್ಷ ಡಾ.ಹರೀಶ್ ಹಂದೆ, ಹೆಸರಘಟ್ಟದ ಐಐಎಚ್‌ಆರ್ ನಿರ್ದೇಶಕ ಡಾ.ಬಿ.ಎನ್.ಎಸ್. ಮೂರ್ತಿ, ತಹಶೀಲ್ದಾರ್ ಪಿ. ಆರತಿ, ಜಿಲ್ಲಾ ತೋಟಗಾರಿಕೆ ಇಲಾಖೆಯ ನಿರ್ದೇಶಕ ರಘು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ, ಉಪಾಧ್ಯಕ್ಷ ವಿದ್ಯಾಧರ, ಸದಸ್ಯರಾದ ಶಿವಕುಮಾರಸ್ವಾಮಿ, ಓಂಕಾರ, ಪ್ರಸಾದ್, ನಳಿನಾ, ಪ್ರಕಾಶ್, ಭವ್ಯಾ, ಪರಮೇಶ್, ರಾಜಪ್ಪ, ಶಿವಕುಮಾರ್, ಹೇಮಾವತಿ ತೋಟಗಾರಿಕೆ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಕೆ.ಸಿ. ಪ್ರಸಾದ್, ಉಪಾಧ್ಯಕ್ಷ ಚಿಕ್ಕಣ್ಣ, ಆತ್ಮಾನಂದ, ದಯಾನಂದ್, ಗುರುಶಾಂತಪ್ಪ, ಚೇತನ್, ಮಂಜುಳಾ, ಶಕುಂತಲಾ, ಮೋಹನ್, ಲೋಕೇಶ್, ಮುಖಂಡರಾದ ಎಸ್.ಡಿ. ದಿಲೀಪ್ ಕುಮಾರ್, ಚಿದಾನಂದ್, ಸಾಗರನಹಳ್ಳಿ ವಿಜಯಕುಮಾರ್ ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button