ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ Sushant Singh Rajput ಸ್ನೇಹಿತ ಕುನಾಲ್ ಜಾನಿ ಬಂಧನ
ಕಳೆದ ವರ್ಷ ಜೂನ್ ನಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput)ಸಾವಿನ ನಂತರ ನಡೆಯುತ್ತಿರುವ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬನನ್ನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಬಂಧಿಸಿದೆ. ಸುದ್ದಿಸಂಸ್ಥೆ ಎಎನ್‌ಐ ಹಂಚಿಕೊಂಡಿರುವ ಟ್ವೀಟ್ನಲ್ಲಿ , ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಮಾದಕ ವಸ್ತು ನಿಯಂತ್ರಣ ಬ್ಯೂರೋ (NCB) ಮುಂಬೈನ ಖಾರ್ ಪ್ರದೇಶದಿಂದ ಹೋಟೆಲ್ ಉದ್ಯಮಿ ಕುನಾಲ್ ಜಾನಿಯನ್ನು ಬಂಧಿಸಿದೆ ಎಂದು ತಿಳಿಸಿದೆ.ಅಲ್ಲದೆ ಬಂಧಿತ ನಟ ಸುಶಾಂತ್ ಸಿಂಗ್ ಅವರ ಆತ್ಮೀಯ ಸ್ನೇಹಿತನಾಗಿದ್ದ. ಅಲ್ಲದೇ ಹಲವಾರು ದಿನಗಳಿಂದ ತಲೆಮರೆಸಿಕೊಂಡಿದ್ದ ಈತನನ್ನ ಎನ್‍ಸಿಬಿ ಕೊನೆಗೂ ಬಂಧಿಸಿದೆ.
ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ಸಲ್ಲಿಸಲಾದ ಚಾರ್ಜ್‌ಶೀಟ್‌ನಲ್ಲಿ ಮೇ ತಿಂಗಳಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ರಿಯಾ ಚಕ್ರವರ್ತಿ, ಆಕೆಯ ಸಹೋದರ ಶೋವಿಕ್ ಚಕ್ರವರ್ತಿ ಮತ್ತು ಇತರ 31 ಜನರ ಹೆಸರನ್ನು ಉಲ್ಲೇಖಿಸಿದೆ.
ಇನ್ನು ಸುಶಾಂತ್ ಸಾವಿನ ನಂತರ ಡ್ರಗ್ಸ್ ಬಗ್ಗೆ ಸುದ್ದಿ ಹರಿದಾಡಿದ ಕಾರಣ ಈ ಸಂಬಂಧಿಸಿದಂತೆ ಬಾಲಿವುಡ್‌ನಲ್ಲಿ ವ್ಯಾಪಕವಾದ ಮಾದಕವಸ್ತು ಬಳಕೆ ಮತ್ತು ಸಾಗಾಣಿಕೆಯ ಕುರಿತು ಕೇಂದ್ರ ಸಂಸ್ಥೆ ತನಿಖೆ ನಡೆಸುತ್ತಿದೆ.
ಸುಶಾಂತ್ ಸಾವಿನ ಸುಮಾರು ಒಂಬತ್ತು ತಿಂಗಳ ನಂತರ, 11,000 ಪುಟಗಳಿಗಿಂತ ಹೆಚ್ಚು ಇರುವ ಚಾರ್ಜ್‌ಶೀಟ್ ಅನ್ನು ಮುಂಬೈನ ನಾರ್ಕೋಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್ ಸಬ್‌ಸ್ಟಾನ್ಸ್ ಆಕ್ಟ್ ಸೆಷನ್ಸ್ ಕೋರ್ಟ್‌ನಲ್ಲಿ ಸಲ್ಲಿಸಲಾಗಿದೆ. ಡಾಕ್ಯುಮೆಂಟ್ ಸುಮಾರು 2,000 ಸಾಕ್ಷಿಗಳ ಹೇಳಿಕೆಗಳನ್ನು ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಸುಶಾಂತ್ ಅವರ ಮಾಜಿ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಾಂಡಾ ಮತ್ತು ಮನೆಯ ಸಹಾಯಕರಾದ ದೀಪೇಶ್ ಸಾವಂತ್ ಅವರ ಹೆಸರನ್ನೂ ಸಹ ಇದರಲ್ಲಿ ಸೇರಿಸಲಾಗಿದೆ ಎನ್ನಲಾಗುತ್ತಿದೆ.
ಜೂನ್ 14 ರಂದು ಸುಶಾಂತ್ ತನ್ನ ಮುಂಬೈ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನು ಪೊಲೀಸರು ಆರಂಭದಲ್ಲಿ ಆತ್ಮಹತ್ಯೆ ಪ್ರಕರಣವೆಂದು ನಿರ್ಧರಿಸಿದ್ದರು. ಆದರೆ ನಂತರ ಸುಶಾಂತ್ ಅವರ ಕುಟುಂಬ ಬಿಹಾರ ಪೊಲೀಸರಿಗೆ ದೂರು ನೀಡಿದ್ದು, ಅವರ ಮಾಜಿ ಪ್ರೇಯಸಿ, ರಿಯಾ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಈ ಆರೋಪವನ್ನು ರಿಯಾ ನಿರಾಕರಿಸಿದ್ದರು.
ಮೂರು ಕೇಂದ್ರ ಏಜೆನ್ಸಿಗಳು – ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್, ಜಾರಿ ನಿರ್ದೇಶನಾಲಯ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ರಿಯಾ ವಿರುದ್ಧ ಪ್ರಕರಣಗಳನ್ನು ಕೈಗೆತ್ತಿಕೊಂಡು ವಿಚಾರಣೆ ನಡೆಸುತ್ತಿವೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಗೆಳತಿ ಗ್ಯಾಬ್ರಿಯೆಲಾ ಡೆಮೆಟ್ರಿಯೇಡ್ಸ್ ಸೋದರ ಅಗಿಸಿಲಾವೋ ಡೆಮೆಟ್ರಿಯೇಡ್ಸ್ ನನ್ನು ಎನ್‍ಸಿಬಿ ಬಂಧಿಸಿದೆ. ಗೋವಾದಲ್ಲಿ ಅಗಿಸಿಲಾವೋ ಬಳಿ ಡ್ರಗ್ಸ್ ಪತ್ತೆಯಾಗಿದ್ದರಿಂದ ಎನ್‍ಸಿಬಿ ಬಂಧಿಸಿತ್ತು.
ಡಿಸೆಂಬರ್ 16, 2020ರಂದು ಮುಂಬೈನ ನಾರ್ಕೋಟಿಕ್ಸ್ ವಿಶೇಷ ನ್ಯಾಯಾಲಯ ಆರೋಪಿ ಅಗಿಸಿಲಾವೋವವನಿಗೆ ಷರತ್ತುಬದ್ಧ ಜಾಮೀನು ನೀಡಿತ್ತು. 50 ಸಾವಿರ ರೂ. ಬಾಂಡ್ ಜೊತೆ ಪಾಸ್‍ಪೋರ್ಟ್ ಸಹ ಎನ್‍ಸಿಬಿ ವಶಕ್ಕೆ ನೀಡಬೇಕೆಂದು ಆದೇಶಿಸಿತ್ತು. ನಗರ ತೊರೆಯುವ ಮೊದಲು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋಗೆ ಸಂಪೂರ್ಣ ಮಾಹಿತಿ ನೀಡಬೇಕೆಂದು ನ್ಯಾಯಾಲಯ ಆದೇಶದಲ್ಲಿ ಹೇಳಿತ್ತು.
ಈ ಮಧ್ಯೆ ಹಿಂದಿ ಕಿರುತೆರೆಯಲ್ಲಿ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ಶೋನ ಸೀಸನ್ 15ರ ಆರಂಭಕ್ಕೆ ಅಂತಿಮ ಹಂತದ ಸಿದ್ಧತೆಗಳು ಆರಂಭಗೊಂಡಿದ್ದು, . ಈ ಬಾರಿ ಸ್ಪರ್ಧಿಯಾಗಿ ರಿಯಾ ಚಕ್ರವರ್ತಿ ಕೂಡ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಒಂದು ವಾರಕ್ಕೆ 35 ಲಕ್ಷ ಸಂಭಾವನೆಯನ್ನು ರಿಯಾ ಕೇಳಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.