ಕೆರೆ ಸೇರುತ್ತಿರುವ ರಾಸಾಯನಿಕ ತ್ಯಾಜ್ಯ: ಗ್ರಾಮಸ್ಥರ ಆಕ್ರೋಶ
ಕುಣಿಗಲ್: ತಾಲ್ಲೂಕಿನ ಬೇಗೂರು ಪಂಚಾಯಿತಿ ವ್ಯಾಪ್ತಿಯ ಗೊಟ್ಟಿಗೆರೆ ಕೆರೆ ಸಮೀಪದ ಕೈಗಾರಿಕಾ ವಲಯದ ರಾಸಾಯನಿಕ ತ್ಯಾಜ್ಯದಿಂದ ಗೊಟ್ಟಿಕೆರೆ ಕೆರೆ ಮತ್ತು ಸಮೀಪದ ಜಮೀನಿನಲ್ಲಿನ ಬೆಳೆಗಳು ನಾಶವಾಗುತ್ತಿವೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗೊಟ್ಟಿಗೆರೆ ಕೆರೆ 13 ಎಕರೆ ಪ್ರದೇಶದಲ್ಲಿದ್ದು, ಪ್ರಭಾವಿಗಳಿಂದ ಒತ್ತುವರಿಯಾಗಿದೆ. ಸಮೀಪದ ಕೈಗಾರಿಕಾ ವಲಯದ ಬಳಿಯ ರಾಜಕಾಲುವೆ ಮುಚ್ಚಿರುವುದರಿಂದ, ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯ ಕೆರೆಗೆ ಹರಿಯುತ್ತಿದೆ. ಕೆರೆಗೆ ಹೊಂದಿಕೊಂಡಿರುವ ಜಮೀನಿನಲ್ಲಿ ಬೆಳೆದಿರುವ ಬೆಳೆಗಳು ನಾಶವಾಗಿವೆ ಎಂದು ಗ್ರಾಮಸ್ಥರಾದ ಮಹೇಶ್, ಚಂದ್ರು, ಧನಂಜಯ್ಯ ಆರೋಪಿಸಿದ್ದಾರೆ.
ಮೂರು ತಿಂಗಳ ಹಿಂದೆ ಅಂತರಗಂಗೆಯಿಂದ ಆವೃತ್ತವಾಗಿದ್ದ ಕೆರೆಗೆ ರಾಸಾಯನಿಕ ತ್ಯಾಜ್ಯ ಸೇರಿರುವುದರಿಂದ ಅಂತರಗಂಗೆ ನೀರಿನಲ್ಲಿ ಕೊಳೆತು ನಾರುತ್ತಿದ್ದು, ಈ ಭಾಗ ಕೆಟ್ಟ ವಾಸನೆಯಿಂದ ಕೂಡಿದೆ. ಹಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವವರೂ ಮೂಗು ಮುಚ್ಚಿಕೊಂಡು ಹೋಗಬೇಕಾಗಿದೆ.
ರಾಸಾಯನಿಕ ತ್ಯಾಜ್ಯದಿಂದ ಕೆರೆ ನೀರು ಕುಲುಷಿತಗೊಂಡಿದ್ದು, ಜಾನುವಾರುಗಳ ಸೇವನೆಗೂ ಸಾಧ್ಯವಾಗುತ್ತಿಲ್ಲ. ಸುತ್ತಮುತ್ತಲಿನ ಗ್ರಾಮಗಳ ಅಂತರ್ಜಲ ಸಹ ಕುಲುಷಿತಗೊಂಡಿದೆ. ಕೆರೆ ಮತ್ತು ನೀರಿನ ಸಂರಕ್ಷಣೆಗಾಗಿ ಗ್ರಾಮ ಪಂಚಾಯಿತಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಪರಿಸರ ಅಧಿಕಾರಿಗಳು ಗಮನಹರಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.