ತಾಯಿ ಸಾಲ ನೀಡಲಿಲ್ಲ ಎಂಬ ಕಾರಣಕ್ಕೆ ಮಹಿಳೆಯ ಪುತ್ರನನ್ನು ಅಪಹರಿಸಿದ ಮೂವರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಹಣ ನೀಡದಿದ್ರೆ ನಿನ್ನ ಮಗನನ್ನು ಕೊಲೆ ಮಾಡೋದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು. ಹಣ ನೀಡುವ ನೆಪದಲ್ಲಿ ತೆರಳಿ ಆರೋಪಿಗಳನ್ನು ಬಂಧಿಸಲಾಗಿದೆ.
ಬೆಂಗಳೂರಿನ ವಿದ್ಯಾರಣ್ಯಪುರದ ಬಾಡಿಗೆ ಮನೆಯೊಂದರಲ್ಲಿ ಶಾಂತಾ ಎಂಬವರು ತಮ್ಮ ಮಕ್ಕಳೊಂದಿಗೆ ವಾಸವಾಗಿದ್ದರು. ಶಾಂತಾ ಅವರ ಪತಿ 2020ರಲ್ಲಿ ನಿಧನರಾಗಿದ್ದಾರೆ.
ಶಾಂತಾ ಕುಟುಂಬಕ್ಕೆ ರವಿ ಎಂಬಾತ ಕಳೆದ ಆರು ವರ್ಷಗಳಿಂದ ಪರಿಚಯ. ಮೂರು ವರ್ಷಗಳ ಹಿಂದೆ ಹಣ ಅವಶ್ಯಕತೆ ಇರೋದಾಗಿ ಹೇಳಿ ಶಾಂತಾ ಅವರ ಬಳಿ ರವಿ ಸಾಲ ಕೇಳಿದ್ದನು. ಆದರೆ ಶಾಂತಾ ಹಣ ನೀಡಿರಲಿಲ್ಲ.ಇತ್ತೀಚೆಗೆ ಶಾಂತಾ ತಮ್ಮ ಜಮೀನು ಮಾರಾಟ ಮಾಡಲು ಮುಂದಾಗಿದ್ದರು. ಈ ವೇಳೆ ರವಿ, ತಾನು ಜಮೀನು ಮಾರಾಟ ಮಾಡುತ್ತೇನೆ. ಮಾರಾಟ ಮಾಡಿಸಿದ್ದಕ್ಕೆ ಕಮಿಷನ್ ರೂಪದಲ್ಲಿ ಸಾಲ ನೀಡುವಂತೆ ಹೇಳಿದ್ದನು.
ಆದ್ರೆ ರವಿಯ ಮಧ್ಯಸ್ಥಿಕೆಗೆ ಶಾಂತಾ ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡ ರವಿ ತನ್ನಿಬ್ಬರು ಮಕ್ಕಳೊಂದಿಗೆ ಶಾಂತಾ ಅವರ ಮಗ ಪವನ್ ಎಂಬಾತನನ್ನು ಬಂಧಿಸಿ , 7 ಲಕ್ಷ ರೂ. ಗೆ ಬೇಡಿಕೆ ಇರಿಸಿದ್ದರು.ರವಿ ಮತ್ತು ಆತನ ಮಕ್ಕಳಾದ ಮಾದೇಶ್ ಮತ್ತು ಶ್ರೀನಿವಾಸ್ ಮೂವರು ಪ್ಲಾನ್ ಮಾಡಿ ಶಾಂತಾ ಅವರ ಮಗನನ್ನು ಅಪಹರಿಸಿದ್ದಾರೆ. ಫೋನ್ ಮಾಡಿದ ಮಾದೇಶ್, ಆದಷ್ಟು ಬೇಗ ಹಣ ನೀಡಬೇಕು ಎಂದು ಡಿಮ್ಯಾಂಡ್ ಮಾಡಿದ್ದಾನೆ.
ಶಾಂತಾ ಅವರ ಜೊತೆ ಮಾದೇಶ್ ಮಾತನಾಡಿರುವ ಆಡಿಯೋ ಕ್ಲಿಪ್ ಲಭ್ಯವಾಗಿದೆ. ನೋಡಿ ಆಂಟಿ, ಸುಮ್ನೇ ಲೇಟ್ ಮಾಡಬೇಡಿ. ಆದಷ್ಟು ಬೇಗ ಹಣ ಕೊಡಿ ಎಂದು ಹೇಳಿದ್ದಾನೆ.ನನಗೆ ಮತ್ತು ನಮ್ಮ ತಂದೆಗೆ ಯಾರೂ ದಿಕ್ಕಿಲ್ಲ. ನಿಮ್ಮ ಮಗನನ್ನ ಕೊಂದು ಜೈಲಿಗೆ ಹೋಗಲು ಸಿದ್ಧ. ಆರು ತಿಂಗಳ ನಂತರ ಬೇಲ್ ಹೊರಗೆ ಬರ್ತಿವಿ. ನಿನ್ನ ಮಗನಿಗೆ ಮದ್ಯ ಕುಡಿಸಿದ್ದೇವೆ. ನಾವು ಸ್ಥಳ ಬದಲಾವಣೆ ಮಾಡ್ತಾ ಇರ್ತಿವಿ ಅಂತ ಧಮ್ಕಿ ಹಾಕಿದ್ದಾನೆ.
ಇತ್ತ ಶಾಂತಾ ಮಗನಿಗೆ ಏನು ಮಾಡಬೇಡ. ಕೊಲೆ ಅಂತ ಮಾತಾಡಬೇಡ. ನಿನಗೆ ಹಣ ಬೇಕು ತಾನೇ, ನಾನು ಕೊಡುತ್ತೇನೆ ಎಂದು ಕಣ್ಣೀರು ಹಾಕಿದ್ದಾರೆ.