4 ಹೈಕೋರ್ಟ್ಗಳಿಗೆ 16 ನ್ಯಾಯಮೂರ್ತಿಗಳ ನೇಮಕ: ಕೊಲಿಜಿಯಂ ಅನುಮೋದನೆ
ನವದೆಹಲಿ (ಪಿಟಿಐ): ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಕೊಲಿಜಿಯಂ, ವಿವಿಧ ಹೈಕೋರ್ಟ್ಗಳಿಗೆ ನ್ಯಾಯಮೂರ್ತಿಗಳಾಗಿ ನೇಮಿಸಲು 16 ಹೆಸರುಗಳಿಗೆ ಅನುಮೋದನೆ ನೀಡಿದೆ.
ಬಾಂಬೆ, ಗುಜರಾತ್, ಒರಿಸ್ಸಾ ಹಾಗೂ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ಗಳಿಗೆ ಈ ನ್ಯಾಯಮೂರ್ತಿಗಳ ನೇಮಕವಾಗಲಿದೆ. ಬುಧವಾರ ನಡೆದ ಕೊಲಿಜಿಯಂನ ಸಭೆಯು ಆರು ಮಂದಿ ನ್ಯಾಯಾಂಗ ಅಧಿಕಾರಿಗಳು, 10 ವಕೀಲರನ್ನು ನ್ಯಾಯಮೂರ್ತಿಗಳಾಗಿ ನಿಯೋಜಿಸಬೇಕು ಎಂಬ ಪ್ರಸ್ತಾವಕ್ಕೆ ಅನುಮೋದನೆ ನೀಡಿತು.
ಸುಪ್ರೀಂ ಕೋರ್ಟ್ನ ವೆಬ್ಸೈಟ್ನ ಮಾಹಿತಿ ಅನುಸಾರ, ನ್ಯಾಯಾಂಗ ಅಧಿಕಾರಿಗಳಾದ ಎ.ಎಲ್.ಪಾನ್ಸಾರೆ, ಎಸ್.ಎಸ್.ಮೋರೆ, ಯು.ಎಸ್.ಜೋಶಿ ಫಾಲ್ಕೆ ಮತ್ತು ಬಿ.ಪಿ.ದೇಶಪಾಂಡೆ. ಇವರನ್ನು ಬಾಂಬೆ ಹೈಕೋರ್ಟ್ಗೆ ನೇಮಿಸಲು ಕೊಲಿಜಿಯಂ ಶಿಫಾರಸು ಮಾಡಿದೆ.
ಅಂತೆಯೇ, ವಕೀಲರಾದ ಆದಿತ್ಯ ಕುಮಾರ್ ಮೊಹಾಪಾತ್ರ, ಮೃಗಂಕಾ ಶೇಖರ್ ಸಾಹೂ, ನ್ಯಾಯಾಂಗ ಅಧಿಕಾರಿಗಳಾದ ರಾಧಾಕೃಷ್ಣ ಪಟ್ನಾಯಕ್, ಶಶಿಕಾಂತ ಮಿಶ್ರಾ ಅವರನ್ನು ಒರಿಸ್ಸಾ ಹೈಕೋರ್ಟ್ಗೆ ನಿಯೋಜಿಸಲು ಶಿಫಾರಸು ಮಾಡಲಾಗಿದೆ.
ವಕೀಲರಾದ ಮೌನ ಮನೀಶ್ ಭಟ್, ಸಮೀರ್ ಜೆ.ದವೆ, ಹೇಮಂತ್ ಎಂ.ಪ್ರಚ್ಚಾಕ್, ಸಂದೀಪ್ ಎನ್.ಭಟ್, ಅನಿರುದ್ಧ ಪ್ರಧ್ಯುಮ್ನ ಮಾಯಿ, ನಿರಲ್ ರಶ್ಮಿಕಾಂತ್ ಮೆಹ್ತಾ, ನಿಶಾ ಮೆಹೆಂದರ ಭಾಯ್ ಥಾಕೋರ್ ಅವರನ್ನು ಗುಜರಾತ್ ಹೈಕೋರ್ಟ್ಗೆ ನೇಮಿಸಲು ಶಿಫಾರಸು ಮಾಡಲಾಗಿದೆ.
ಸುಪ್ರೀಂ ಕೋರ್ಟ್ನ ಕೊಲಿಜಿಯಂ ಸೆಪ್ಟೆಂಬರ್ 29, 2021ರಂದು ನಡೆದಿದ್ದ ಸಭೆಯಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ನ್ಯಾಯಮೂರ್ತಿಯಾಗಿ ನೇಮಿಸಲು ವಕೀಲ ಸಂದೀಪ್ ಮೌದ್ಗಿಲ್ ಅವರ ಹೆಸರನ್ನು ಶಿಫಾರಸು ಮಾಡಿತ್ತು ಎಂದು ವೆಬ್ಸೈಟ್ನಲ್ಲಿದ್ದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ಯು.ಯು.ಲಲಿತ್ ಮತ್ತು ಎ.ಎಂ.ಖಾನ್ವಿಲ್ಕರ್ ಅವರು ಸಿಜೆಐ ನೇತೃತ್ವದ ಕೊಲಿಜಿಯಂನ ಇತರ ಸದಸ್ಯರಾಗಿದ್ದಾರೆ.