ಬೆಂಗಳೂರು; “ಆಧುನಿಕ ಭಾರತದ ಮಹಿಳೆಯರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿದ್ದಾರೆ. ಪರಿಣಾಮ ಅವರು ಒಂಟಿಯಾಗಿರುವುದನ್ನೇ ಇಷ್ಟಪಡುತ್ತಿದ್ದಾರೆ. ಮದುವೆಯ ನಂತರವೂ ಮಕ್ಕಳನ್ನು ಹೆರುವುದಕ್ಕೆ ಮುಂದಾಗುತ್ತಿಲ್ಲ, ಬದಲಾಗಿ ಬಾಡಿಗೆ ತಾಯಿಯರಿಂದ ಮಕ್ಕಳನ್ನು ಪಡೆಯಲು ಬಯಸುತ್ತಿದ್ದಾರೆ” ಎಂದು ಸಚಿವ ಡಾ|ಕೆ. ಸುಧಾಕರ್ (K Sudhakar) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಭಾನುವಾರ ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವೈಜ್ಞಾನಿಕ ವಿಜ್ಞಾನ ಸಂಸ್ಥೆಯಲ್ಲಿ (Nimhans) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವರು ಈ ಮೇಲಿನ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸಮಾರಂಭದಲ್ಲಿ ಮಾತನಾಡಿರುವ ಸಚಿವ ಡಾ|ಕೆ. ಸುಧಾಕರ್, “ಇಂದು, ನಾನು ಇದನ್ನು ಹೇಳಲು ವಿಷಾದಿಸುತ್ತೇನೆ. ಭಾರತದ ಬಹಳಷ್ಟು ಆಧುನಿಕ ಮಹಿಳೆಯರು ಒಂಟಿಯಾಗಿ ಉಳಿಯಲು ಬಯಸುತ್ತಾರೆ. ಅವರು ಮದುವೆಯಾದರೂ ಮಕ್ಕಳಿಗೆ ಜನ್ಮ ನೀಡಲು ಬಯಸುತ್ತಿಲ್ಲ. ಅವರು ಬಾಡಿಗೆ ತಾಯ್ತನವನ್ನು ಬಯಸುತ್ತಾರೆ. ಆದ್ದರಿಂದ ನಮ್ಮ ಆಲೋಚನೆಯಲ್ಲಿ ಒಂದು ಮಾದರಿ ಬದಲಾವಣೆಯಿದೆ, ಇದು ಒಳ್ಳೆಯದಲ್ಲ. ಅಲ್ಲದೆ, ಭಾರತೀಯ ಸಮಾಜದ ಮೇಲೆ ಪಾಶ್ಚಿಮಾತ್ಯ ಪ್ರಭಾವವೂ ಮಹಿಳೆಯರ ಈ ಮನಸ್ಥಿತಿಗೆ ಕಾರಣವಾಗಿದೆ. ಪರಿಣಾಮ ಜನರು ತಮ್ಮ ಹೆತ್ತವರನ್ನು ಸಹ ತಮ್ಮೊಂದಿಗೆ ಇಟ್ಟುಕೊಳ್ಳಲು ಹಿಂಜರಿಯುತ್ತಿದ್ದಾರೆ” ಎಂದು ಹೇಳಿದ್ದಾರೆ.