ದಸರೆಯ ನೆನಪು: ಗರಡಿ ಮನೆಯಲ್ಲಿ ವರ್ಷವಿಡೀ ತರಬೇತಿ!- ಪೈಲ್ವಾನ್ ಎಸ್.ಮಹಾದೇವ್
ಮೈಸೂರು: ಮೈಸೂರಿನಲ್ಲಿ ಕುಸ್ತಿ ಕ್ರೀಡೆ ದಸರಾ ಉತ್ಸವದ ಜತೆಗೇ ಬೆಳೆದುಬಂದಿದೆ. 1955ರ ವರೆಗೂ ದಸರಾ ಕುಸ್ತಿ ಅರಮನೆ ಅವರಣದಲ್ಲೇ ನಡೆಯುತ್ತಿತ್ತು. ನಂತರ ಹೊರಗೆ ನಡೆಸಲು ಶುರು ಮಾಡಿದರು.
ದಸರಾ ಕುಸ್ತಿಯಲ್ಲಿ ಅವಕಾಶ ಗಿಟ್ಟಿಸಲು ಭಾರೀ ಪೈಪೋಟಿಯೇ ನಡೆಯುತ್ತಿತ್ತು. ಪೈಲ್ವಾನರು ಗರಡಿ ಮನೆಯಲ್ಲಿ ವರ್ಷವಿಡೀ ತರಬೇತಿಯನ್ನು ಪಡೆಯಲೇಬೇಕಿತ್ತು. ಉಸ್ತಾದರ ಸಮ್ಮುಖದಲ್ಲಿ ಟ್ರಯಲ್ಸ್ ನಡೆದು ಆಯ್ಕೆಯಾಗಬೇಕಿತ್ತು. ಟ್ರಯಲ್ಸ್ ಕೂಡ ರೋಮಾಂಚಕಾರಿಯಾಗಿರುತ್ತಿತ್ತು.
ಕುಸ್ತಿ ಆಡಲು ಬರುತ್ತಿದ್ದ ಪ್ರತಿಯೊಬ್ಬ ಪೈಲ್ವಾನರ ಹಿಂದೆ ನೂರಾರು ಅಭಿಮಾನಿಗಳು ಇರುತ್ತಿದ್ದರು. ಜಟ್ಟಿಗಳು ತೊಡೆ ತಟ್ಟಿ ಅಖಾಡಕ್ಕೆ ಇಳಿದಾಗಲಂತೂ ಅಲ್ಲಿದ್ದವರಲ್ಲಿ ವಿದ್ಯುತ್ ಸಂಚರಿಸಿದ ಅನುಭವ. ಅಖಾಡದ ಸುತ್ತಲೂ ಸಾವಿರಾರು ಸಂಖ್ಯೆಯಲ್ಲಿ ಕಿಕ್ಕಿರಿದು ನೆರೆಯುತ್ತಿದ್ದ ಕುಸ್ತಿಪ್ರೇಮಿಗಳ ಕೇಕೆ ಮುಗಿಲು ಮುಟ್ಟುತ್ತಿತ್ತು. ಐದು ದಶಕದ ಹಿಂದಿನ ದಸರಾ ಕುಸ್ತಿ ಹಣಾಹಣಿಯನ್ನು ನೆನಪಿಸಿಕೊಂಡರೆ ಈಗಲೂ ಮೈಮನ ರೋಮಾಂಚನಗೊಳ್ಳುತ್ತದೆ.
ನಾನು ಕುಸ್ತಿ ಆಡುತ್ತಿದ್ದಾಗ ಗೆದ್ದವರಿಗೆ ₹ 8, ಸೋತವರಿಗೆ ₹ 6 , ಕುಸ್ತಿ ಸಮಬಲದಲ್ಲಿ ಕೊನೆಗೊಂಡರೆ ಇಬ್ಬರಿಗೂ ತಲಾ ₹ 4 ಕೊಡುತ್ತಿದ್ದರು. ಹೆಸರುವಾಸಿಯಾದ ಪೈಲ್ವಾನರಿಗೆ ಹೆಚ್ಚು ಹಣ ಸಿಗುತ್ತಿತ್ತು. ಆದರೆ ಕುಸ್ತಿಪಟುಗಳು ಯಾರೂ ಹಣದ ಆಸೆಯಿಂದ ಬರುತ್ತಿರಲಿಲ್ಲ. ದಸರೆ ಕುಸ್ತಿಯಲ್ಲಿ ಪಾಲ್ಗೊಳ್ಳುವುದೇ ಪ್ರತಿಷ್ಠೆಯ ವಿಷಯವಾಗಿತ್ತು.
ರಾಜರು ಆಸ್ಥಾನದಲ್ಲಿಯೇ ಇರಿಸಿಕೊಳ್ಳುತ್ತಿದ್ದ ಕೆಲವು ಕುಸ್ತಿ ಪಟುಗಳು ಕೂಡ ದಸರೆಯಲ್ಲಿ ತಮ್ಮ ತಾಕತ್ತು ತೋರಿಸುತ್ತಿದ್ದರು. ಹೊರ ರಾಜ್ಯಗಳಿಂದಲೂ ಹೆಚ್ಚಿನ ಪೈಲ್ವಾನರು ಪಂದ್ಯಾವಳಿಗೆ ಬರುತ್ತಿದ್ದರು. ದಸರಾ ಕುಸ್ತಿ ಎಂದರೆ ಅದೊಂದು ಹಬ್ಬ. ಪೈಲ್ವಾನರ ಹಬ್ಬ. ಕುಸ್ತಿ ಪ್ರೇಮಿಗಳ ಅಪರೂಪದ ಹಬ್ಬ. ಆದರೆ ಬರಬರುತ್ತಾ ದಸರಾ ಕುಸ್ತಿಯ ಆಕರ್ಷಣೆ ಕಡಿಮೆಯಾಯಿತು.
ಮಹಾರಾಜರು ಅಂಬಾರಿಯಲ್ಲಿ ಕುಳಿತು ಮೆರವಣಿಗೆಯಲ್ಲಿ ಸಾಗಿದ್ದ ದೃಶ್ಯವನ್ನು ಹಲವು ಬಾರಿ ಕಣ್ತುಂಬಿಕೊಂಡಿದ್ದೆ. ಅರಮನೆ ದರ್ಬಾರ್ ನನ್ನ ಸ್ಮೃತಿಕೋಶದಲ್ಲಿ ಇನ್ನೂ ಅಚ್ಚಳಿಯದೇ ಉಳಿದಿದೆ. ಮಹಾರಾಜರು ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಿದ್ದಂತೆಯೆ ಅರಮನೆಯ ದೀಪಗಳು ಝಗಮಗಿಸುತ್ತಿದ್ದವು. ಇಂದಿನ ದಸರೆಗೂ, ಅಂದಿನ ದಸರೆಗೂ ಅಜಗಜಾಂತರ ವ್ಯತ್ಯಾಸ.