ವಿಫುಲವಾದ ಅವಕಾಶಗಳನ್ನು ಬಳಸಿಕೊಂಡು ಭವಿಷ್ಯ ರೂಪಿಸಿಕೊಳ್ಳಿ; ಆರ್ ನಳಿನಿ.

ದೇವನಹಳ್ಳಿ: ಬದಲಾಗಿರುವ ಕಾಲಮಾನಕ್ಕೆ ತಕ್ಕ ಹಾಗೆ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ತಂತ್ರಜ್ಞಾನಗಳು ಬೆಳೆದಿದ್ದು ಅವುಗಳನ್ನು ಬಳಸಿಕೊಂಡು ಇರುವ ವಿಪುಲವಾದ ಅವಕಾಶಗಳನ್ನು ಬಳಸಿ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ (ಡೀಮ್ ಆಫ್ ಸೈನ್ಸ್) ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಆರ್ ನಳಿನಿರವರು ತಿಳಿಸಿದರು.
ತಾಲ್ಲೂಕಿನ ವಿಜಯಪುರ ಪಟ್ಟಣದ ಗಿರಿಜಾ ಶಂಕರ ಕಲ್ಯಾಣ ಮಂಟಪದಲ್ಲಿ ಪ್ರಗತಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಏರ್ಪಡಿಸಲಾಗಿದ್ದ ಗ್ರಾಜುಯೇಷನ್ ಸೆರ್ಮನಿ ಪದವಿ ಪ್ರಮಾಣ ಕಾರ್ಯಕ್ರಮ ದಲ್ಲಿ ಪದವಿಗಳಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರಗಳನ್ನು ವಿತರಿಸಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಸುಸ್ತಿರವಾದ ಆರೋಗ್ಯವಂತ ದೇಹದಲ್ಲಿ ಉತ್ತಮ ಚಿಂತನೆಗಳು ಮೂಡುತ್ತವೆ ಎಂಬ ನಾಣ್ಣುಡಿ ಇದ್ದು, ಅದಕ್ಕಾಗಿ ಪ್ರತಿಯೊಬ್ಬರು ಆರೋಗ್ಯವಂತ ಸದೃಢ ದೇಹ ದಾರ್ಢ್ಯತೆಯನ್ನು ಯೋಗ ಮತ್ತು ಕ್ರೀಡೆಗಳನ್ನು ರೂಡಿಸಿಕೊಳ್ಳುವ ಮೂಲಕ ಪಡೆಯಬೇಕೆಂದು ತಿಳಿಸಿದರು. ಪದವಿಯ ನಂತರ ಹೆಚ್ಚಿನ ಶಿಕ್ಷಣಕ್ಕಾಗಿ ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಇರುವ ಅವಕಾಶಗಳ ಬಗ್ಗೆ ತಿಳಿಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ನಗರೇಶ್ವರ ಎಜುಕೇಶನ್ ಟ್ರಸ್ಟ್ ನ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಎಸ್ ಕೃಪಾಶಂಕರ್ ರವರು ಮಾತನಾಡಿ ಪದವಿಗಳಿಸಿ ಕಾಲೇಜಿನಿಂದ ಹೊರಹೋಗುತ್ತಿರುವ ವಿದ್ಯಾರ್ಥಿಗಳು ಪ್ರಮುಖ ಮೂರು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ತಾವು ಎಲ್ಲಾ ಕಲಿತಿದ್ದು ಮುಗಿದಿದೆ ಎಂಬ ಅಹಂ ಬಿಡಬೇಕು ಜೀವನಪೂರ್ತಿ ಕಲಿಯತಕ್ಕದ್ದು ಇನ್ನೂ ಇದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು, ಕಲಿತಿದ್ದು ಮುಗಿದಿದೆ ಎಂಬಂತಿದ್ದರೂ ಮತ್ತೆ ಮತ್ತೆ ಅದನ್ನೇ ಕಲಿಯುವ ಹಂಬಲ ಇಟ್ಟುಕೊಂಡಿರಬೇಕೆಂದು ತಿಳಿಸಿದರು.
ಈ ಮೂರು ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳದೆ ಜೀವನದಲ್ಲಿ ಪರಿಪೂರ್ಣತೆ ಸಾಧಿಸಲು ಸಾಧ್ಯವಾಗುವುದಿಲ್ಲವೆಂದು ತಿಳಿಸಿದರು.
ಭಾರತ ಸಂಸ್ಕೃತಿ ಉತ್ತಮ;. ಸಾಮಾನ್ಯವಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ 18-20 ವರ್ಷಗಳು ಪೂರೈಸಿದ ನಂತರ ಮಕ್ಕಳು ಅವರ ಪಾಡಿಗೆ ಅವರು ಬೆಳೆದುಕೊಳ್ಳಲಿ ಎಂದು ಮಕ್ಕಳನ್ನು ಹೊರ ಕಳಿಸಿಬಿಡುತ್ತಾರೆ, ಆದರೆ ಭಾರತ ದೇಶದಲ್ಲಿ ನಮ್ಮ ಸಂಸ್ಕೃತಿಯಲ್ಲಿ ಮಕ್ಕಳನ್ನು ಎಷ್ಟೇ ವರ್ಷಗಳಾದರೂ ತಂದೆ ತಾಯಿಯಂದಿರು ಜೊತೆಯಲ್ಲಿಟ್ಟುಕೊಂಡು ಮಕ್ಕಳಂತೆ ಕೊನೆವರೆಗೂ ಪೋಷಿಸುತ್ತಾರೆಂದು ಇದು ಬೇರೆಲ್ಲೂ ಕಾಣಲು ಸಿಗದಂತಹ ಭಾರತೀಯ ಸಂಸ್ಕೃತಿ ಎಂದು ತಿಳಿಸಿದರು.
ಪ್ರಗತಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಎನ್.ನಾಗರಾಜ್ ಮಾತನಾಡಿ, ದೇಶದ ಅಭಿವೃದ್ಧಿ ಯುವಜನರ ಕೈಯಲ್ಲಿದೆ. ಯುವಜನರು ತಮ್ಮಲ್ಲಿರುವ ಶಕ್ತಿ, ಸಾಮರ್ಥ್ಯವನ್ನು ಬಳಕೆ ಮಾಡಿಕೊಂಡು, ತಮ್ಮ ಜೀವನ ರೂಪಿಸಿಕೊಳ್ಳುವುದರ ಜೊತೆಗೆ, ಸಮಾಜದಲ್ಲಿ ದುರ್ಬಲರನ್ನೂ ಜೊತೆಯಲ್ಲಿ ಕರೆದೊಯ್ಯುವ ಕೆಲಸ ಮಾಡಬೇಕು. ಅಭಿವೃದ್ಧಿಯತ್ತ ಸಾಗಲು ಶಿಕ್ಷಣವೊಂದೆ ಮಾನದಂಡವಲ್ಲ, ಬದ್ಧತೆ ಬೇಕು ಎಂದರು.
ಪ್ರಗತಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ.ಸತೀಶ್ ಕುಮಾರ್, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಆರ್.ಶೆಟ್ಟಿನಾಯಕ್ ಹಾಗೂ ಪ್ರಾಧ್ಯಾಪಕರು. ವಿದ್ಯಾರ್ಥಿಗಳ ಪೋಷಕರು ಇದ್ದರು.