ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಪಂಚಾಯತ್ ನೌಕರರ ಸಂಘದಿಂದ ಪ್ರತಿಭಟನೆ

ಚಾಮರಾಜನಗರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ಜಿಲ್ಲಾ ನೌಕರರ ಸಂಘ (ಸಿಐಟಿಯು) ದಿಂದ ಪ್ರತಿಭಟನೆ ನಡೆಯಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೆ ವೇಳೆ ಸಂಘದ ಅಧ್ಯಕ್ಷ ಸಿದ್ದರಾಜು ಮಾತನಾಡಿ, ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರವಸುಲಿಗಾರ, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್ಸ್, ನೀರುಗಂಟಿ, ಜವಾನ, ಸ್ವಚ್ಛತಾ ಗಾರರನ್ನು ಏಕಕಾಲಕ್ಕೆ ಸರ್ಕಾರಿ ನೌಕರರನ್ನಾಗಿ ಘೋಷಿಸಬೇಕು, ಕನಿಷ್ಠ ವೇತನ 31 ಸಾವಿರ ನಿಗದಿಗೊಳಿಸಬೇಕು, ನೌಕರರಿಗೆ ನಿವೃತ್ತಿ ಅಥವಾ ಮರಣ ಹೊಂದಿದರೆ ಅವರಿಗೆ ಪ್ರತಿ ತಿಂಗಳು ಕನಿಷ್ಠ ವೇತನ 6 ಸಾವಿರ ಪಿಂಚಣಿ ನೀಡಬೇಕು, ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್ಸ್ ಗಳನ್ನು ಮುಂದುವರಿಸಬೇಕು, ವರ್ಗಾವಣೆಗೆ ಅವಕಾಶ ನೀಡಬೇಕು, ನೀರುಗಂಟಿಗಳಿಗೆ ಮಲ್ಟಿಪರ್ಪಸ್ ಎಂದಿರುವುದನ್ನು ಕೈ ಬಿಟ್ಟು ನಿರ್ದಿಷ್ಟ ಕೆಲಸಗಳನ್ನು ನಿಗದಿಪಡಿಸಬೇಕು, ಲೆಕ್ಕ ಸಹಾಯಕ ಹುದ್ದೆ ಸೃಷ್ಟಿಯಾಗಬೇಕು, ಗ್ರೇಡ್ -1 ಕಾರ್ಯದರ್ಶಿ ಹುದ್ದೆಗೆ ಶೇಕಡ 100 ರಷ್ಟು, ಗ್ರೇಡ್ -2 ಕಾರ್ಯದರ್ಶಿಗೆ ಶೇಕಡ 50ರಷ್ಟು, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ಶೇಕಡ 50ರಷ್ಟು ಸ್ಥಾನಗಳನ್ನು ಭರ್ತಿ ಮಾಡಬೇಕು, ಪಿಡಿಒ ಹುದ್ದೆಗೆ ಶೇಕಡ 60ರಷ್ಟು ಸ್ಥಾನವನ್ನು ಗ್ರೇಡ್-1 ಕಾರ್ಯದರ್ಶಿಗಳಿಗೆ ನೀಡಬೇಕು ಅಲ್ಲದೆ ಜಿಲ್ಲಾ ಮಟ್ಟದಲ್ಲಿ ಮುಂಬಡ್ತಿಗೆ ಅವಕಾಶ ನೀಡಬೇಕು, ಐಪಿಡಿ ಸಾಳಪ್ಪ ವರದಿಯಂತೆ ಸ್ವಚ್ಛಗಾರರ ನೇಮಕವಾಗಬೇಕು, ಸೇವಾ ಹಿರಿತನ ಪರಿಗಣಿಸಿ ವೇತನ ಹೆಚ್ಚಳ ಮಾಡಬೇಕು, ನೌಕರರಿಗೆ ಆಸ್ಪತ್ರೆ ವೆಚ್ಚ ಭರಿಸಬೇಕು, ಹಳೇ ಪಿಂಚಣಿ ಜಾರಿ ಮಾಡುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ನಂತರ ಪ್ರತಿಭಟನೆ ಕೈಬಿಟ್ಟರು.
ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷರಾದ ಮಲ್ಲು, ಆರ್ಮುಗಂ ಹೊನ್ನೂರು, ಪ್ರಧಾನ ಕಾರ್ಯದರ್ಶಿ ಸುರೇಶ್ ಅಮ್ಮನಪುರ, ಖಜಾಂಚಿ ದೊರೆಸ್ವಾಮಿ, ಪತ್ರಿಕಾ ಕಾರ್ಯದರ್ಶಿ ಕೃಷ್ಣನಾಯಕ, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ರಾಜಣ್ಣ, ಯಳಂದೂರು ತಾಲೂಕು ಅಧ್ಯಕ್ಷಿ ಹೊನ್ನೂರು ಮಹದೇವಮ್ಮ, ಚಾಮರಾಜನಗರ ತಾಲೂಕು ಅಧ್ಯಕ್ಷ ಕೃಷ್ಣ, ಮುಖಂಡರಾದ ರಾಧಾಕೃಷ್ಣ, ವೈ.ಕೆ.ಪಳನಿ ಮಾದಾಪುರ ರಂಗಸ್ವಾಮಿ, ಸರಗೂರು ಅಮಾಸ ಸೇರಿದಂತೆ ಇತರರು ಭಾಗವಹಿಸಿದ್ದರು.
ವರದಿ: ಇರಾವಾಡಿ ಸಿದ್ದಪ್ಪಾಜಿ tv8newskannada ಚಾಮರಾಜನಗರ