ಲಂಚಕ್ಕೆ ಬೇಡಿಕೆ ಇಟ್ಟರೆ ಕಠಿಣ ಕ್ರಮ: ಸಚಿವ ಮುನಿರತ್ನ
ಬೆಂಗಳೂರು: ‘ಸಹಾಯಕ ತೋಟಗಾರಿಕಾ ಅಧಿಕಾರಿಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಯಾರಾದರೂ ಕಾನೂನು ಬಾಹಿರವಾಗಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣಗಳು ಇಲಾಖೆ ಗಮನಕ್ಕೆ ಬಂದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ತೋಟಗಾರಿಕಾ ಸಚಿವ ಮುನಿರತ್ನ ತಿಳಿಸಿದ್ದಾರೆ.
‘309 ಸಹಾಯಕ ತೋಟಗಾರಿಕಾ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿದೆ. ಸಚಿವನಾಗಿ ಅಧಿಕಾರಿ ವಹಿಸಿಕೊಂಡ ಕೆಲವೇ ದಿನಗಳಲ್ಲಿ ನನಗೆ ಮನವಿ ಸಲ್ಲಿಸಿದ್ದರು. ಪ್ರಕ್ರಿಯೆಯನ್ನು ತ್ವರಿತವಾಗಿ ಮುಗಿಸುವ ಉದ್ದೇಶದಿಂದ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದೆ. ಇಲಾಖೆಯಲ್ಲಿರುವ ಅಧಿಕಾರಿಗಳ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಎಲ್ಲ ಕ್ರಮವನ್ನೂ ಕೈಗೊಂಡಿದ್ದೇನೆ. ಆರ್ಥಿಕ ಇಲಾಖೆಯಿಂದ ಸಹಮತಿ ಪಡೆಯುವಲ್ಲಿ ಪ್ರತಿ ಹಂತದಲ್ಲೂ ಆದೇಶಗಳನ್ನೂ ಮಾಡಲಾಗಿದೆ’ ಎಂದು ಅವರು ಹೇಳಿದ್ದಾರೆ. ಆಯ್ಕೆಯಾಗಿರುವ 306 ಅಭ್ಯರ್ಥಿಗಳ ಪೈಕಿ 293 ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಸಿಂಧುತ್ವ ಪ್ರಮಾಣ ಪತ್ರ, ಪೊಲೀಸ್ ವರದಿ ಪರಿಶೀಲನೆ ಆಗಿದ್ದು, ವೈದ್ಯಕೀಯ ತಪಾಸಣೆಯೂ ಪೂರ್ಣಗೊಂಡಿದೆ. ಇನ್ನೂ 14 ಅಭ್ಯರ್ಥಿಗಳ ದಾಖಲೆಗಳು ಪರಿಶೀಲನಾ ಹಂತದಲ್ಲಿವೆ. ಆದರೂ ಸಹ ಇನ್ನುಳಿದ ಅಭ್ಯರ್ಥಿಗಳಿಗೆ ಕೂಡಲೇ ನೇಮಕಾತಿ ಆದೇಶ ನೀಡಿ, 6 ತಿಂಗಳು ತರಬೇತಿ ನೀಡಲು ಸರ್ಕಾರದ ಪ್ರಧಾನ ಕಾರ್ಯದರ್ಶಿಯವರಿಗೆ ಸೂಚಿಸಲಾಗಿದೆ’ ಎಂದಿದ್ದಾರೆ.