ರಾಜ್ಯ

ಚರ್ಚಿಸದೇ 150 ಎಕರೆ ಸ್ವಾಧೀನಕ್ಕೆ ಮುಂದಾದ ಧೂಡಾ: ರೈತರ ಆಕ್ಷೇಪ

ದಾವಣಗೆರೆ: ವಸತಿ ಬಡಾವಣೆ ಅಭಿವೃದ್ಧಿ ಪಡಿಸಲು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರವು ರೈತರ ಜೊತೆ ಯಾವುದೇ ಚರ್ಚೆ ನಡೆಸದೆ ಏಕಾಏಕಿ ಕುಂದವಾಡದಲ್ಲಿ 150 ಎಕರೆ ಜಮೀನು ಸ್ವಾಧೀನಕ್ಕೆ ಮುಂದಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

‘ಮೊದಲು ಕೆಲ ರೈತರ ಬಳಿ ಮಾತನಾಡಿ ಕುಂದುವಾಡದಲ್ಲಿ 53 ಎಕರೆಗೆ ಸ್ವಾಧೀನ ಪಡಿಸಿಕೊಳ್ಳಲು ನಿರ್ಧರಿಸಿತ್ತು. ಕೆಲವರು ಒಪ್ಪಿಗೆ ನೀಡಿಲ್ಲ. ಆದರೂ ಒತ್ತಾಯಪೂರ್ವಕವಾಗಿ ತೆಗೆದುಕೊಂಡಿದ್ದಾರೆ ಎಂಬ ಆರೋಪವೂ ಇದೆ. ಒಪ್ಪಿಗೆ ನೀಡಿದ ರೈತರ ಜಮೀನು ಸ್ವಾಧೀನ ಪಡಿಸಿಕೊಳ್ಳುವುದಕ್ಕೆ ನಮ್ಮ ವಿರೋಧವಿಲ್ಲ. ಈ 53 ಎಕರೆ ಜಮೀನಿನ ಸುತ್ತ ಇರುವ 150 ಎಕರೆ ಸ್ವಾಧೀನ ಪಡಿಸಿಕೊಳ್ಳಲು ಸಭೆ ನಡೆಸಿ ಚರ್ಚಿಸಲಾಗಿದೆ. ಶೀಘ್ರದಲ್ಲಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಧೂಡಾ ಪ್ರಕಟಣೆ ನೀಡಿದೆ. ರೈತರಲ್ಲಿ ಚರ್ಚಿಸದೇ ಹೇಗೆ ಪ್ರಕಟಣೆ ನೀಡಿದ್ದಾರೆ’ ಎಂದು ಎಪಿಎಂಸಿ ಮಾಜಿ ನಿರ್ದೇಶಕ, ಕುಂದವಾಡದ ಜೆ.ಎನ್‌. ಮಾರುತಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈಗಾಗಲೇ ಗ್ರಾಮದ ರೈತರು 250 ಎಕರೆ ಜಮೀನನ್ನು ಗೃಹ ನಿರ್ಮಾಣ ಮಂಡಳಿಗೆ ನೀಡಿ, ಬೀದಿ ಪಾಲಾಗಿದ್ದಾರೆ. ಇತ್ತೀಚೆಗೆ 53 ಎಕರೆಯಲ್ಲಿ ನಿವೇಶನ ನಿರ್ಮಿಸಲು ಧೂಡಾವು ಅರ್ಜಿ ಆಹ್ವಾನಿಸಿತ್ತು. ಆಗ 22 ಸಾವಿರ ಅರ್ಜಿ ಬಂದಿರುವ ಕಾರಣಕ್ಕೆ ಈಗ ಮತ್ತೆ 150 ಎಕರೆ ಜಮೀನು ಸ್ವಾಧೀನ ಮಾಡಲು ಬಂದಿರುವುದು ಅವೈಜ್ಞಾನಿಕ ಪ್ರಕ್ರಿಯೆ ಎಂದು ದೂರಿದರು.

ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರವು ತಕ್ಷಣವೇ ಕುಂದವಾಡ ಗ್ರಾಮದ ರೈತರ ಜಮೀನು ಸ್ವಾಧೀನ ಪಡೆಯುವ ನಿರ್ಧಾರವನ್ನು ಕೈಬಿಡಬೇಕು. ಇಲ್ಲದಿದ್ದರೆ, ಧೂಡಾ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು. ಬಳಿಕ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು. ಆಗಲೂ ಈ ಪ್ರಕ್ರಿಯೆ ಕೈ ಬಿಡದಿದ್ದರೆ ಧೂಡಾ ಕಚೇರಿಗೆ ಬೀಗ ಹಾಕಲಾಗುವುದು ಎಂದು ‌ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಕುಂದುವಾಡ ಗ್ರಾಮದ ರೈತರಾದ ಮಿಟ್ಲಕಟ್ಟೆ ಚಂದ್ರಪ್ಪ, ಎಚ್.ಜಿ. ಗಣೇಶಪ್ಪ, ಎಚ್.ಎನ್. ಗುರುನಾಥ್, ಎನ್.ಶಿವಪ್ಪ, ಎಚ್.ಜಿ. ಮಂಜಪ್ಪ, ಜೆ.ಆರ್.ಮಹಾಂತೇಶ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button