ಸುದ್ದಿ

ಗೂಳಿಹಟ್ಟಿ ಶೇಖರ್‌ ವಿರುದ್ಧ ಕ್ರೈಸ್ತ ಸಂಘಟನೆಗಳ ಆಕ್ರೋಶ

ಶಿವಮೊಗ್ಗ: ‘ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಕ್ರೈಸ್ತ ಮಿಷನರಿಗಳ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ’ ಎಂದು ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ಅಧ್ಯಕ್ಷ ಡಿ. ರಾಜಶೇಖರ್ ಖಂಡಿಸಿದರು.

‘ಮತಾಂತರ ವಿಷಯವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದಾರೆ. ಮತಾಂತರ ತಡೆಯಲು ಹೋದವರ ಮೇಲೆ ಜಾತಿನಿಂದನೆ ಮತ್ತು ಅತ್ಯಾಚಾರದ ಪ್ರಕರಣ ದಾಖಲಿಸಲಾಗುತ್ತಿದೆ ಎಂಬ ಸುಳ್ಳು ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ಅಂತಹ ಒಂದು ಪ್ರಕರಣವೂ ದಾಖಲಾಗಿಲ್ಲ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಸಮುದಾಯವನ್ನು ಗುರಿಯಾಗಿರಿಸಿಕೊಂಡು ಅವಮಾನಿಸಲಾಗಿದೆ. ಘಟನೆಯನ್ನು ರಾಜ್ಯದ ಎಲ್ಲಾ ಕ್ರೈಸ್ತ ಸಮುದಾಯಗಳು ಒಕ್ಕೊರಲಿನಿಂದ ಖಂಡಿಸುತ್ತವೆ. ಸಭಾಪತಿ, ಗೃಹ ಸಚಿವರು ಸಹ ರಾಜ್ಯದಲ್ಲಿ ಮತಾಂತರ ವಿರೋಧಿ ಕಾನೂನು ಜಾರಿಗೆ ತರುವುದಾಗಿ ಹೇಳಿದ್ದಾರೆ. ಸರ್ಕಾರ ಈ ವಿಷಯ ಕುರಿತು ಸವಿಸ್ತಾರವಾಗಿ ಚರ್ಚಿಸಬೇಕು’ ಎಂದು ಆಗ್ರಹಿಸಿದರು.

‘ಕೆಲವು ಸಂಘಟನೆಗಳು ಪ್ರಾರ್ಥಾನಾಲಯಗಳ ಮೇಲೆ ದಾಳಿ ಮಾಡಿವೆ. ಗುರುಗಳನ್ನು ಎಲ್ಲರ ಎದುರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೈಬಲ್ ಗ್ರಂಥ ಸುಟ್ಟುಹಾಕಿದ್ದಾರೆ. ಆದರೆ, ಈವರೆಗೂ ಆಸೆ, ಆಮಿಷವೊಡ್ಡಿ ಒತ್ತಾಯದ ಮತಾಂತರ ಮಾಡಿರುವ ಯಾವ ಪ್ರಕರಣಗಳೂ ಸಾಬೀತಾಗಿಲ್ಲ’ ಎಂದರು.

‘ಪ್ರಾರ್ಥನೆಗಳಲ್ಲಿ ಭಾಗವಹಿಸುವ ಭಕ್ತರ ಧಾರ್ಮಿಕ ಸ್ವಾತಂತ್ರ್ಯ ಕಿತ್ತುಕೊಳ್ಳುವ ಕಾಯ್ದೆ ಜಾರಿಗೆ ತಂದು ಕ್ರೈಸ್ತರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಹುನ್ನಾರ ಸ್ಪಷ್ಟವಾಗಿ ಕಾಣುತ್ತಿದೆ. ನಿರಂತರ ದೌರ್ಜನ್ಯ, ದಬ್ಬಾಳಿಕೆಗಳು ಮುಂದುವರಿದರೆ ಕಾನೂನು ಬದ್ಧ ಹೋರಾಟ ಮಾಡುತ್ತೇವೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜೆ. ಭಾಸ್ಕರ್ ಬಾಬು, ಎಂ.ಎಸ್. ಸ್ಯಾಮ್ಯುಯೆಲ್, ಹರೀಶ್, ಶಿವರಾಜ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button