ಸುದ್ದಿ

ಸ್ತ್ರೀಶಕ್ತಿ, ಬಿಸಿಯೂಟ, ಸೇರಿ ರಾಜ್ಯದಲ್ಲಿ S.M.ಕೃಷ್ಣ ಜಾರಿಗೆ ತಂದ ಅದ್ಭುತ ಯೋಜನೆಗಳು ಇಲ್ಲಿವೇನೋಡಿ,

ಕರ್ನಾಟಕದ (Karnataka) ಹಿರಿಯ ರಾಜಕಾರಣಿ, ಮಾಜಿ ಸಿಎಂ (Former CM), ಮಾಜಿ ವಿದೇಶಾಂಗ ಸಚಿವ ಎಸ್​ಎಂ ಕೃಷ್ಣ (SM Krishna) ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ. ಕಳೆದ 6 ತಿಂಗಳಿನಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೃಷ್ಣ ಅವರು ತಮ್ಮ 92ನೇ ವಯಸ್ಸಿಗೆ ನಿಧನರಾಗಿದ್ದಾರೆ.

ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಗೆದ್ದು ಶಾಸಕರಾದ ನಂತರ ಕಾಂಗ್ರೆಸ್​ ಸೇರಿದ ಶಾಸಕ, ಸಚಿವ, ಮುಖ್ಯಮಂತ್ರಿ, ರಾಜ್ಯಪಾಲ ಹಾಗೂ ವಿದೇಶಾಂಗ ಸಚಿವರಾಗುವವರೆಗೂ ಬೆಳೆದರು. ಇವರು ಸಿಎಂ ಆಗಿದ್ದ ಕಾಲದಲ್ಲಿ ಭೀಕರ ಬರಗಾಲ, ಕಾವೇರಿ ಹೋರಾಟ, ನಟ ರಾಜಕುಮಾರ್ ಅಪಹರಣಗಳಂತಹ ಸಾಕಷ್ಟು ಸಂಕಷ್ಟಗಳನ್ನ ಎದುರಿಸಿದರು. ಆದರೂ ಕೆಲವು ಅದ್ಭುತ ಯೋಜನೆಗಳನ್ನ ಜಾರಿಗೆ ತಂದು ರಾಜ್ಯದ ಅಭಿವೃದ್ಧಿಗೆ ಬುನಾದಿ ಹಾಕಿದರು. ಅವುಗಳ ಬಗ್ಗೆ ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ.

ಸ್ತ್ರೀ ಶಕ್ತಿ ಸಂಘಗಳ ಉಗಮ

ರಾಜ್ಯದಲ್ಲಿ ಇಂದು ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘಗಳು ಪ್ರತೀ ಗ್ರಾಮವನ್ನ ತಲುಪಿವೆ. ಇದರಿಂದ ಕೋಟ್ಯಾಂತರ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಈ ಯೋಜನೆ ಎಸ್ಎಂ ಕೃಷ್ಣ ಅವರ ಕಾಲದಲ್ಲಿ ಆರಂಭವಾಗಿತ್ತು. ಮಹಿಳಾ ಮತ್ತು ಮಕ್ಕಳ ಅಭವೃದ್ಧಿ ಸಚಿವೆಯಾಗಿದ್ದ ಮೋಟಮ್ಮ ಈ ಸ್ವಸಹಾಯ ಗುಂಪುಗಳು ಪ್ರತೀ ಹಳ್ಳಿ ತಲುಪುವುದರಲ್ಲಿ ನಿರ್ಣಾಯಕ ಪಾತ್ರವಾಹಿಸಿದ್ದರು. ಈ ಯೋಜನೆಯಿಂದ ಮಹಿಳೆಯರಿಗೆ ಆರ್ಥಿಕವಾಗಿ, ಸಾಮಾಜಿಕ ಶಕ್ತಿ ಬಲಗೊಳ್ಳಲು ಸಹಕಾರಿಯಾಯಿತು.

ಯಶಸ್ವಿನಿ ಯೋಜನೆ

ರಾಜ್ಯದ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಸೇವೆ ಸಿಗಬೇಕೆಂದು ಎಸ್ಎಂ ಕೃಷ್ಣ ಅವರ ಆಡಳಿತದ ಅವಧಿಯಲ್ಲಿ ಯಶಸ್ವಿನಿ ವಿಮಾ ಯೋಜನೆಯನ್ನ ಜಾರಿಗೆ ತರಲಾಯಿತು. ಈ ಕಾರ್ಯಕ್ರಮವು ಕರ್ನಾಟಕದ ಜನರಿಗೆ ಕೈಗೆಟುಕುವ ಆರೋಗ್ಯ ವಿಮೆಯನ್ನು ಒದಗಿಸುತ್ತದೆ. ಇದರಿಂದ ಪ್ರತಿಯೊಬ್ಬರೂ ಅವರಿಗೆ ಹೆಚ್ಚು ಅಗತ್ಯವಿರುವಾಗ ಉನ್ನತ ಗುಣಮಟ್ಟದ ಆರೋಗ್ಯವನ್ನು ಪಡೆಯಬಹುದು. ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯು ಕರ್ನಾಟಕದ ಅಸಂಘಟಿತ ವಲಯದ ಕಾರ್ಮಿಕರು, ಮಧ್ಯಮ ಮತ್ತು ಕಡಿಮೆ-ಮಧ್ಯಮ ಆದಾಯ ಹೊಂದಿರುವವರನ್ನು ಕೇಂದ್ರೀಕರಿಸಿ, ಎಲ್ಲರಿಗೂ ಕೈಗೆಟುಕುವ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ.

ಅಕ್ಷರ ದಾಸೋಹ

ಎಸ್ಎಂ ಕೃಷ್ಣ ಅವಧಿಯಲ್ಲಿ ಜಾರಿಗೆ ಬಂದ ಮತ್ತೊಂದು ಮಹತ್ವದ ಯೋಜನೆ ಎಂದರೆ ಅಕ್ಷರ ದಾಸೋಹ. ಮಠಗಳಲ್ಲಿ ಜಾರಿಯಲ್ಲಿದ್ದ ಅನ್ನದಾಸೋಹದಿಂದ ಪ್ರೇರಿತಗೊಂಡು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಎಲ್ಲಾ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನ ಜಾರಿಗೆ ತಂದರು. ಕೃಷ್ಣ ಸಿಎಂ ಆಗಿದ್ದಾಗ ಮೂರು ವರ್ಷಗಳ ಕಾಲ ರಾಜ್ಯ ಭೀಕರ ಬರ ಎದುರಿಸಿತ್ತು. ಆ ಸಂದರ್ಭಗಳಿಂದ ವಿದ್ಯಾರ್ಥಿಗಳು ಖಾಲಿ ಹೊಟ್ಟೆಯಲ್ಲಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿರಲಿಲ್ಲ. ಇದೇ ಕಾರಣದಿಂದ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಊಟದ ಯೋಜನೆಯನ್ನು ಜಾರಿಗೆ ತಂದಿದ್ದರು. ಇದರಿಂದ ಲಕ್ಷಾಂತರ ಮಕ್ಕಳು ಹಸಿವನ್ನ ನೀಗಿಸಿದರು. ಇದರಿಂದ ಶಾಲೆ ಬಿಟ್ಟ ಮಕ್ಕಳು ಮತ್ತೆ ಶಾಲೆಗೆ ಮರಳಿ ಬರಲು ಸಹಕಾರಿಯಾಯಿತು.

ಬೆಂಗಳೂರು ಐಟಿ

ಹಬ್ರಾಜ್ಯರಾಜಧಾನಿ ಬೆಂಗಳೂರು ಇಂದು ಐಟಿ ಸಿಟಿ ಎಂದು ಕರೆಸಿಕೊಳ್ಳುತ್ತಿರುವುದರ ಹಿಂದೆ ಎಸ್ಎಂ ಕೃಷ್ಣ ಅವರ ಪಾತ್ರ ಮಹತ್ವದ್ದಾಗಿದೆ. ರಾಜ್ಯದಲ್ಲಿ ಮೊದಲ ಪ್ಲೈ ಓವರ್, ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಿದ್ದು ಇವರು ಸಿಎಂ ಆಗಿದ್ದ ಕಾಲದಲ್ಲೇ. ನಂತರ ಐಟಿ ಬಿಟಿ ಕ್ಷೇತ್ರಕ್ಕೂ ಇವರು ಅಗಾದವಾದ ಬೆಂಬಲ ನೀಡಿದರು. ಮುಖ್ಯಮಂತ್ರಿಯಾಗಿದ್ದಾಗ ಐಟು ಕಂಪನಿಗಳಿಗೆ ಅಗಾಧವಾಗಿ ಬೆಂಬಲ ನೀಡಿ ಬೆಂಗಳೂರು ನಗರ ಸಿಲಿಕಾನ್ ವ್ಯಾಲಿ ಎನಿಸಿಕೊಳ್ಳುವಲ್ಲಿ ಭದ್ರ ಬುನಾದಿ ಹಾಕಿದರು. ಅದರ ಫಲ ಇಂದು ಬೆಂಗಳೂರು ಜಾಗತಿಕ‌ ಮಟ್ಟದಲ್ಲಿ ಐಟಿ ಸಿಟಿಯಾಗಿ ಗುರುತಿಸಿಕೊಂಡಿದೆ.ಇದರಿಂದಲೇ ಎಸ್ಎಂ ಕೃಷ್ಣ ಅಧಿಕಾರಕ್ಕೆ ಬಂದಾಗ 13 ಸಾವಿರ ಕೋಟಿ ಇದ್ದ ರಾಜ್ಯದ ಬಜೆಟ್, ಅವರು ಅಧಿಕಾರದಿಂದ ಇಳಿಯುವಾಗ 34 ಸಾವಿರ ಕೋಟಿಗೆ ತಲುಪಿತ್ತು.

ಬೆಂಗಳೂರಿಗೆ ಮೆಟ್ರೋ- ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಎಸ್​ಎಂ ಕೃಷ್ಣ ಸಿಎಂ ಆದ ನಂತರ ರಾಜ್ಯದಲ್ಲಿ ಮೊದಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಯಿತು. ಕೆಂಪೇಗೌಡ ವಿಮಾನ ನಿಲ್ದಾಣ ದೇವನಹಳ್ಳಿಯಲ್ಲಿ ನಿರ್ಮಾಣಗೊಳ್ಳಲು ಕೃಷ್ಣ ಪ್ರಮುಖ ಕಾರಣರಾಗಿದ್ದಾರೆ. ಅಲ್ಲದೆ ಬೆಂಗಳೂರಿನಲ್ಲಿ ಮೆಟ್ರೋ ತರುವಲ್ಲಿಯೂ ಎಸ್ ಎಂ ಕೃಷ್ಣ ಪ್ರಮುಖ ಪಾತ್ರವಹಿಸಿದ್ದರು. ನಾಡುಪ್ರಭು ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದರೆ, ಆದರೆ ಆಧುನಿಕ ಬೆಂಗಳೂರು ನಿರ್ಮಾತೃ ಎಂಬ ಹೆಸರು ಎಸ್.ಎಂ.ಕೃಷ್ಣಗೆ ಸಲ್ಲಲಿದೆ. ಸಣ್ಣ ನಗರ ಇಂದು ಜಾಗತಿಕ ನಗರವಾಗಿ ಬೆಳೆದಿದೆ. 30-40 ಲಕ್ಷ ಜನ ನೇರವಾಗಿ ಐಟಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಬರಹ ಮತ್ತು ಸಂಗ್ರಹ : ಪೂರ್ಣಿಮಾ ಪವಾರ್ ಸಂಪಾದಕರು tv8newskannada ಬೆಂಗಳೂರು

Related Articles

Leave a Reply

Your email address will not be published. Required fields are marked *

Back to top button