‘ಬ್ಯಾಡ್ ಮ್ಯಾನರ್ಸ್’ ಚಿತ್ರೀಕರಣಕ್ಕೆ ಸಜ್ಜಾದ ಅಭಿಷೇಕ್ ಅಂಬರೀಶ್
ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅಮರ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾ ಬಳಿಕ ಅಭಿಷೇಕ್ ಮತ್ತೆ ತೆರೆಮೇಲೆ ಕಾಣಿಸಿಕೊಂಡಿಲ್ಲ. ಅಂಬಿ ಪುತ್ರನ ಎರಡನೇ ಸಿನಿಮಾಗಾಗಿ ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ. ಅಂದಹಾಗೆ ಅಭಿಷೇಕ್, ಅಮರ್ ಸಿನಿಮಾ ಬಳಿಕ ಯಾರ ಜೊತೆ ಸಿನಿಮಾ ಮಾಡುತ್ತಾರೆ, ಯಾವ ಸಿನಿಮಾ ಮಾಡುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಸ್ಯಾಂಡಲ್ ವುಡ್ ಮಾಸ್ ಡೈರೆಕ್ಟರ್ ಸುಕ್ಕಾ ಸೂರಿ ನಿರ್ದೇಶನದ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಕುತೂಹಲಕ್ಕೆ ತೆರೆ ಎಳೆದರು.
ಅಂದಹಾಗೆ ಅಭಿಷೇಕ್ ನಟನೆಯ, ಸುಕ್ಕಾ ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಸಿನಿಮಾ ಪ್ರಾರಂಭವಾಗಿ ಒಂದು ವರ್ಷವಾಗಿದೆ. ಕೊರೊನಾ ಕಾರಣದಿಂದ ಸಿನಿಮಾ ಚಿತ್ರೀಕರಣ ವಿಳಂಬವಾಗುತ್ತಿದೆ. ಕೊರೊನಾ 2ನೇ ಅಲೆಯಲ್ಲಿ ಸ್ಥಗಿತವಾದ ಚಿತ್ರೀಕರಣವನ್ನು ಮತ್ತೆ ಪ್ರಾರಂಭ ಮಾಡಿರಲಿಲ್ಲ. ಇದೀಗ ಮತ್ತೆ ಬ್ಯಾಡ್ ಮ್ಯಾನರ್ಸ್ ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ ಅಭಿಷೇಕ್ ಅಂಬರೀಶ್.
ಕೊರೊನಾ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದಂತೆ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡುತ್ತಿದ್ದಾರೆ. ಅಕ್ಟೋಬರ್ 5ರಿಂದ ಬ್ಯಾಡ್ ಮ್ಯಾನರ್ಸ್ ತಂಡ ಮತ್ತೆ ಅಕಾಡಕ್ಕೆ ಇಳಿಯುತ್ತಿದೆ. ಬ್ಯಾಡ್ ಮ್ಯಾನರ್ಸ್ ನಲ್ಲಿ ನಾಯಕಿಯಾಗಿ ನಟಿ ರಚಿತಾ ರಾಮ್ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ನಟಿ, ಮಾಡೆಲ್ ಪ್ರಿಯಾಂಕಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಪ್ರಿಯಾಂಕಾ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದು, ಚಿತ್ರದ ಬಗ್ಗೆ ಸಖತ್ ಎಕ್ಸಾಯಿಟ್ ಆಗಿದ್ದಾರೆ.
ನಿರ್ದೇಶಕ ಸೂರಿ ಮತ್ತು ಅಭಿಷೇಕ್ ಅಂಬರೀಶ್ ಅವರ ಮೊದಲ ಕಾಂಬಿನೇಷನ್ ಸಿನಿಮಾವಾಗಿದೆ. ಚಿತ್ರಕ್ಕೆ ಸುಧೀರ್ ಕೆ.ಎಂ. ನಿರ್ಮಾಣ ಮಾಡುತ್ತಿದ್ದಾರೆ. ಚರಣ್ ಸಂಗೀತ ಸಿನಿಮಾಗಿದೆ. ಈಗಾಗಲೇ ಫಸ್ಟ್ ಲುಕ್ ಮೂಲಕ ಅಭಿಮಾನಿಗಳ ಗಮನ ಸೆಳೆದಿರುವ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಚಿತ್ರದಲ್ಲಿ ಅಭಿಷೇಕ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಗನ್ ಹಿಡಿದು ಪೋಸ್ ನೀಡಿರುವ ಫಸ್ಟ್ ಲುಕ್ ನೋಡಿದ್ರೆ ಅಭಿಷೇಕ್ ಸಿನಿಮಾದಲ್ಲಿ ರಾ ಲುಕ್ ನಲ್ಲಿ ಅಬ್ಬರಿಸಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಅಂದಹಾಗೆ ಅಮರ್ ನಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಅಭಿಷೇಕ್ ಮೊದಲ ಬಾರಿಗೆ ಮಾಸ್ ಅವತಾರದಲ್ಲಿ ದರ್ಶನ ನೀಡಲಿದ್ದಾರೆ.