‘ಬಂದರೆ ಬರಲಿ ಬಿಡಿ’: ‘ಸಲಗ’ ಬಿಡುಗಡೆಗೆ ‘ಕೋಟಿಗೊಬ್ಬ 3’ ನಿರ್ಮಾಪಕ ಡೋಂಟ್ ಕೇರ್
ಅಕ್ಟೋಬರ್ 1 ರಿಂದ ಕರ್ನಾಟಕದ ಹಲವು ರಾಜ್ಯಗಳಲ್ಲಿ ಚಿತ್ರಮಂದಿರಗಳು ಪೂರ್ಣ ಪ್ರಮಾಣದ ಸೀಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲಿವೆ.
ಚಿತ್ರಮಂದಿರಗಳನ್ನು ಪೂರ್ಣವಾಗಿ ತೆರೆಯುವಂತೆ ಕರ್ನಾಟಕ ಸರ್ಕಾರ ಆದೇಶ ನೀಡುತ್ತಿದ್ದಂತೆಯೇ ಹಲವು ಚಿತ್ರತಂಡಗಳು ತಮ್ಮ ಸಿನಿಮಾಗಳ ಬಿಡುಗಡೆ ದಿನಾಂಕವನ್ನು ನಾ ಮುಂದು-ತಾ ಮುಂದೆ ಎಂದು ಘೋಷಿಸುತ್ತಿವೆ. ಹಬ್ಬದ ಸೀಸನ್‌ಗೆ ಸರಿಯಾಗಿ ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಈ ಹಿಂದಿನ ಬೇಸರವನ್ನು ತುಸು ಮರೆಸಿದೆ.
ಶಿವರಾಜ್ ಕುಮಾರ್ ನಟನೆಯ ‘ಭಜರಂಗಿ 2’, ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ‘ಸಲಗ’, ‘ಸುದೀಪ್ ನಟನೆಯ ‘ಕೋಟಿಗೊಬ್ಬ 3’, ಲವ್ಲಿ ಪ್ರೇಮ್ ನಟನೆಯ ‘ಪ್ರೇಮಂ ಪೂಜ್ಯಂ’ ಇನ್ನೂ ಕೆಲವು ಸಿನಿಮಾಗಳು ಬಿಡುಗಡೆ ದಿನಾಂಕ ಘೋಷಿಸಿವೆ. ಆದರೆ ‘ಸಲಗ’ ಹಾಗೂ ‘ಕೋಟಿಗೊಬ್ಬ 3’ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗಲಿದ್ದು, ಸ್ಟಾರ್ ವಾರ್‌ಗೆ ಅವಕಾಶ ಮಾಡಿಕೊಟ್ಟಿದೆ.
ಈ ಬಗ್ಗೆ ನಿನ್ನೆ ಮಾತನಾಡಿದ್ದ ‘ಸಲಗ’ ಸಿನಿಮಾ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ”ಸುದೀಪ್ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸುತ್ತೇನೆ” ಎಂದಿದ್ದರು. ಆದರೆ ಇಂದು ಮಾತನಾಡಿರುವ ‘ಕೋಟಿಗೊಬ್ಬ 3′ ನಿರ್ಮಾಪಕ ಸೂರಪ್ಪ ಬಾಬು ತಮ್ಮ ಸಿನಿಮಾ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.’ಸಲಗ’ ಹಾಗೂ ‘ಕೋಟಿಗೊಬ್ಬ 3’ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗುತ್ತಿರುವ ಬಗ್ಗೆ ನಿನ್ನೆ ಮಾತನಾಡಿದ್ದ ವಿಜಯ್, ”ಸಿನಿಮಾ ಬಿಡುಗಡೆ ದಿನಾಂಕವನ್ನು ನಿರ್ಮಾಪಕರು ನಿಶ್ಚಯಿಸುತ್ತಾರೆ. ಅದಕ್ಕೂ ನಟರಿಗೂ ಸಂಬಂಧವಿಲ್ಲ. ನನ್ನ ಹಾಗೂ ಸುದೀಪ್ ನಡುವೆ ಒಳ್ಳೆಯ ಬಾಂಧವ್ಯವಿದೆ. ಯಾರೇ ತಂದಿಟ್ಟರು ಆ ಬಾಂಧವ್ಯ ಹಾಳಾಗಲ್ಲ. ಸುದೀಪ್ ನನಗಿಂತಲೂ ಹಿರಿಯ ನಟ ಮತ್ತು ಆರೋಗ್ಯವಾಗಿ ಯೋಚಿಸುವ ಮನುಷ್ಯ” ಎಂದಿದ್ದಾರೆ. ಇನ್ನು ನಟ ಸುದೀಪ್ ಸಹ ‘ಸಲಗ’ ತಂಡಕ್ಕೆ ಟ್ವಿಟ್ಟರ್ ಮೂಲಕ ಶುಭ ಹಾರೈಸಿದ್ದಾರೆ. ‘ಸಲಗ’ ಸಿನಿಮಾದ ಮುಹೂರ್ತದಲ್ಲಿ ಭಾಗವಹಿಸಿದ್ದ ಸುದೀಪ್ ಸಿನಿಮಾಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದ್ದರು.