ನಿಖಿಲ್ ಕುಮಾರಸ್ವಾಮಿ ಮುಂದಿನ ಸಿನಿಮಾಗೆ ಭರ್ಜರಿ ತಯಾರಿ
ತಂದೆಯಾಗಿರುವ ಖುಷಿಯಲ್ಲಿದ್ದಾರೆ ನಟ ನಿಖಿಲ್ ಕುಮಾರಸ್ವಾಮಿ. ರೆವತಿ-ನಿಖಿಲ್ ದಂಪತಿಗೆ ಸೆಪ್ಟೆಂಬರ್ 24 ರಂದು ಗಂಡು ಮಗು ಜನಿಸಿದೆ. ಇದರ ಬೆನ್ನಲ್ಲೆ ಈಗ ಮತ್ತೊಂದು ಸಿಹಿ ಸುದ್ದಿ ನಿಖಿಲ್ ಸಿನಿಮಾ ಕುರಿತು ಹೊರ ಬಿದ್ದಿದೆ.
ಕೆಲವು ದಿನಗಳ ಹಿಂದಷ್ಟೆ ‘ರೈಡರ್’ ಸಿನಿಮಾದ ಡಬ್ಬಿಂಗ್ ಪೂರ್ಣಗೊಳಿಸಿರುವ ನಿಖಿಲ್ ಕುಮಾರಸ್ವಾಮಿ ಇದೀಗ ಹೊಸ ಸಿನಿಮಾ ಒಂದರಲ್ಲಿ ನಟಿಸಲು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ದೊಡ್ಡ ಬಜೆಟ್‌ನ ಸಿನಿಮಾ ಇದಾಗಿರಲಿದೆ.
ಪೂರ್ಣವಾಗಿರುವ ಆದರೆ ಇನ್ನೂ ಬಿಡುಗಡೆ ಆಗಿರದ ‘ರೈಡರ್’ ಸಿನಿಮಾ ಸೇರಿದರೆ ಈವರೆಗೆ ನಾಲ್ಕು ಸಿನಿಮಾಗಳಲ್ಲಿ ನಿಖಿಲ್ ನಟಿಸಿದ್ದು, ಐದನೇ ಸಿನಿಮಾ ಘೋಷಣೆ ಆಗಿದೆ.
ಕೆವಿಎನ್ ಪ್ರೊಡಕ್ಷನ್ಸ್‌ನ ಸಿನಿಮಾದಲ್ಲಿ ನಿಖಿಲ್ ಕುಮಾರಸ್ವಾಮಿ ನಟಿಸಲಿದ್ದು, ಸಿನಿಮಾವನ್ನು ಹೊಸ ನಿರ್ದೇಶಕ ಮಂಜು ಅಥರ್ವ ನಿರ್ದೇಶನ ಮಾಡಲಿದ್ದಾರೆ. ‘ಬೈ ಟು ಲವ್’, ಗಣೇಶ್ ನಟನೆಯ ‘ಸಖತ್’ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಕೆವಿಎನ್ ಪ್ರೊಡಕ್ಷನ್ಸ್, ಪ್ರೇಮ್ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್ ಸಿನಿಮಾಕ್ಕೂ ಬಂಡವಾಳ ಹೂಡಿದೆ. ಈ ಪ್ರೊಡಕ್ಷನ್ ಹೌಸ್‌ನ ನಾಲ್ಕನೇ ಸಿನಿಮಾ ನಿಖಿಲ್ ಕುಮಾರಸ್ವಾಮಿ ಅವರೊಟ್ಟಿಗೆ ಮೂಡಿಬರಲಿದೆ.
ನಿಖಿಲ್ ಜೊತೆ ಸಿನಿಮಾ ಮಾಡುವುದಾಗಿ ಕೆವಿಎನ್ ಪ್ರೊಡಕ್ಷನ್ಸ್ ಜೂನ್ ತಿಂಗಳಲ್ಲಿಯೇ ಘೋಷಿಸಿತ್ತು, ಕೊರೊನಾ ಹಾಗೂ ನಿಖಿಲ್ ಅವರು ‘ರೈಡರ್’ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದರಿಂದ ಸಿನಿಮಾದ ಚಿತ್ರೀಕರಣ ಆರಂಭವಾಗುವುದು ತಡವಾಗಿದೆ. ಸಿನಿಮಾಕ್ಕೆ ಹೆಸರಿನ್ನೂ ಇಟ್ಟಿಲ್ಲ. ‘ಮಫ್ತಿ’, ‘ಪ್ರೇಮಂ ಪೂಜ್ಯಂ’ ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಮಂಜು ಅಥರ್ವ ಈ ಸಿನಿಮಾದ ಮೂಲಕ ಮೊದಲ ಬಾರಿಗೆ ಸ್ವತಂತ್ರ್ಯ ನಿರ್ದೇಶಕರಾಗುತ್ತಿದ್ದಾರೆ.
ಸಿನಿಮಾದ ಪೋಸ್ಟರ್‌ಗಾಗಿ ಫೊಟೊ ಶೂಟ್ ಆಗಬೇಕಿತ್ತು ಆದರೆ ಅದೇ ವೇಳೆಗೆ ನಿಖಿಲ್ ತಂದೆಯಾದ ಕಾರಣ ಕೆಲವು ದಿನಗಳ ಮಟ್ಟಿಗೆ ಫೋಟೊ ಶೂಟ್ ಮುಂದೂಡಲಾಗಿದೆ. ಫೋಟೊಶೂಟ್ ಮುಗಿದ ಕೂಡಲೇ ಚಿತ್ರೀಕರಣ ಆರಂಭವಾಗಲಿದೆ.
ನಿಖಿಲ್ ಕುಮಾರಸ್ವಾಮಿ ನಟಿಸಿರುವ ‘ರೈಡರ್’ ಸಿನಿಮಾದ ಡಬ್ಬಿಂಗ್ ಕೆಲವು ದಿನಗಳ ಹಿಂದಷ್ಟೆ ಮುಗಿದಿದೆ. ಸಿನಿಮಾವನ್ನು ನವೆಂಬರ್ 1ಕ್ಕೆ ತೆರೆಗೆ ತರಲು ಚಿತ್ರತಂಡ ಯೋಜಿಸಿದೆ. ಸಿನಿಮಾವನ್ನು ತೆಲುಗಿನ ಹಿಟ್ ನಿರ್ದೇಶಕ ವಿಜಯ್ ಕುಮಾರ್ ಕೊಂಡ ನಿರ್ದೇಶನ ಮಾಡಿದ್ದಾರೆ. ನಾಯಕಿಯಾಗಿ ಕಾಶ್ಮೀರ ಪರದೇಶಿ ನಟಿಸಿದ್ದಾರೆ. ಸಿನಿಮಾದಲ್ಲಿ ಕಾಲೇಜು ಯುವಕನ ಪಾತ್ರದಲ್ಲಿ ನಿಖಿಲ್ ನಟಿಸಿದ್ದಾರೆ.