ಕುಪ್ಪೂರು ಮಠದ ಉತ್ತರಾಧಿಕಾರಿಯಾಗಿ 8ನೇ ತರಗತಿ ಬಾಲಕ ನೇಮಕ
ಕುಪ್ಪೂರು: ಮಠದ ಉತ್ತರಾಧಿಕಾರಿಯಾಗಿ 8ನೇ ತರಗತಿ ಬಾಲಕ ತೇಜಸ್ ಅವರನ್ನು ನೇಮಿಸಲಾಗಿದೆ.
ತೇಜಸ್ ಹೆಸರು ಘೋಷಣೆಯಾಗುತ್ತಿದ್ದಂತೆ ಪುತ್ರನನ್ನು ಬಿಗಿದಪ್ಪಿ ಪೋಷಕರು ಕಣ್ಣೀರು ಹಾಕಿದ್ದಾರೆ. ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಅವರನ್ನು ನೆನೆದು ದುಃಖಿಸಿದ್ದಾರೆ.
ಕುಪ್ಪೂರು ಗದ್ದುಗೆ ಮಠಕ್ಕೆ ವಂಶಪಾರಂಪರ್ಯವಾಗಿ ಉತ್ತರಾಧಿಕಾರಿಗಳನ್ನು ನೇಮಿಸಿಕೊಂಡು ಬರಲಾಗುತ್ತಿದೆ. ಹೀಗಾಗಿ, ಲಿಂಗೈಕ್ಯರಾದ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಸಹೋದರನ ಮಗನನ್ನು ಉತ್ತರಾಧಿಕಾರಿಯಾಗಿ ನೇಮಿಸಲಾಗಿದೆ.
ಈ ಬಗ್ಗೆ ಸಚಿವ ಮಾಧುಸ್ವಾಮಿ ಮಾತನಾಡಿ, ʻಲಿಂಗೈಕ್ಯ ಶ್ರೀಗಳ ಇಚ್ಛೆಯಂತೆ ಅವರ ಪೂರ್ವಾಶ್ರಮದ ಸಹೋದರನ ಮಗನನ್ನು ಉತ್ತರಾಧಿಕಾರಿ ಎಂದು ಘೋಷಿಸಲಾಗಿದೆ. ಗುರುಹಿರಿಯರು, ಅವರ ಕುಟುಂಬದವರು ನಿನ್ನೆ ರಾತ್ರಿ ಚರ್ಚೆ ಮಾಡಿ ತೇಜಸ್ರನ್ನೂ ಒಪ್ಪಿಸಿ ಉತ್ತರಾಧಿಕಾರಿಯನ್ನಾಗಿ ಮಾಡಲಾಗಿದೆ. ಅಂತ್ಯಸಂಸ್ಕಾರದ ವಿಧಿವಿಧಾನ ಪೂರೈಸಲು ಉತ್ತರಾಧಿಕಾರಿಯ ಅವಶ್ಯಕತೆ ಇದೆ. ಹಾಗಾಗಿ, ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿದ್ದೇವೆ. ಮುಂದೆ ಶಾಸ್ತ್ರೋಕ್ತವಾಗಿ ಕಾರ್ಯಕ್ರಮ ಮಾಡಿ ಪೀಠಾರೋಹಣ ಮಾಡಿಸಲಾಗುವುದುʼ ಎಂದು ತಿಳಿಸಿದ್ದಾರೆ.