ಎಲ್ಲ ವಿಮಾನ ನಿಲ್ದಾಣಗಳಲ್ಲೂ ರೇಷ್ಮೆ ಮಳಿಗೆ: ಸಚಿವ ನಾರಾಯಣ ಗೌಡ
ಶಿವಮೊಗ್ಗ: ರೇಷ್ಮೆ ಮಾರುಕಟ್ಟೆಗೆ ಉತ್ತೇಜನ ನೀಡಲು ರಾಜ್ಯದ ಎಲ್ಲ ವಿಮಾನ ನಿಲ್ದಾಣಗಳಲ್ಲೂ ರೇಷ್ಮೆ ಮಳಿಗೆಗಳನ್ನು ತೆರೆಯಲಾಗುವುದು ಎಂದು ರೇಷ್ಮೆ ಸಚಿವ ನಾರಾಯಣ ಗೌಡ ಹೇಳಿದರು.
ತಾಲ್ಲೂಕಿನ ಕಾಚಿನಕಟ್ಟೆ ರೇಷ್ಮೆ ಬೆಳಗಾರರ ಮಂಜುನಾಥ್ ಅವರ ರೇಷ್ಮೆ ತಾಕಿಗೆ ಸೋಮವಾರ ಭೇಟಿ ನೀಡಿ, ರೇಷ್ಮೆ ಬೆಳೆಗಾರರ ಕುಂದು ಕೊರತೆ ಆಲಿಸಿದ ನಂತರ ಅವರು ಮಾತನಾಡಿದರು.
ರಾಮನಗರದಲ್ಲಿ ಒಂದು ಅತ್ಯುತ್ತಮ, ನವೀನವಾದ ಹಾಗೂ ರೈತಸ್ನೇಹಿಯಾದ ಹೈಟೆಕ್ ರೇಷ್ಮೆ ಮಾರುಕಟ್ಟೆ ಸ್ಥಾಪಿಸಲು ಯೋಜಿಸಲಾಗುತ್ತಿದೆ. ರಾಜ್ಯದ ರೇಷ್ಮೆ ಅತ್ಯಂತ ನೈಜವಾಗಿದೆ. ಹಾಗಾಗಿಯೇ ಜಗತ್ ಪ್ರಸಿದ್ಧವಾಗಿದೆ. ₹ 10 ಲಕ್ಷದ ಸೀರೆ ಸಿದ್ಧಪಡಿಸುವ ಯೋಜನೆ ಇದೆ. ರೇಷ್ಮೆ ಬೆಳೆಗಾರರ ಕುಂದು ಕೊರತೆ ಆಲಿಸಲು ಶೀಘ್ರ ಸಹಾಯವಾಣಿ ತೆರೆಯಲಾಗುವುದು ಎಂದು ಮಾಹಿತಿ ನೀಡಿದರು.
ಜಿಲ್ಲೆಯ ರೇಷ್ಮೆ ಬೆಳೆಗಾರರು ವರ್ಷಕ್ಕೆ 10ರಿಂದ 11 ಬೆಳೆ ಬೆಳೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಇಂತಹ ಸಾಧನೆ ಮಾಡಿರುವ ರೇಷ್ಮೆ ಬೆಳೆಗಾರರಿಗೆ ಬಹುಮಾನ ನೀಡಿ ಗೌರವಿಸಲಾಗುವುದು. ಬೇರೆ ಭಾಗಗಳಿಗೆ ಹೋಲಿಸಿದರೆ ಶಿವಮೊಗ್ಗದಲ್ಲಿ ಉತ್ತಮ ರೇಷ್ಮೆ ಇಳುವರಿ ಇದೆ. ರಾಜ್ಯದ ಇತರೆಡೆ ವರ್ಷಕ್ಕೆ 8 ಬೆಳೆಯಷ್ಟೆ ಬೆಳೆಯುತ್ತಿದ್ದಾರೆ. ಅಧಿಕಾರಿಗಳು ಸಮರ್ಪಕ ಸಲಹೆ, ಸಹಕಾರ ನೀಡಿ ಉತ್ತಮವಾಗಿ ಸ್ಪಂದಿಸಬೇಕು. ಕೊರೊನಾ ಲಾಕ್‍ಡೌನ್ ಪರಿಣಾಮ ರೇಷ್ಮೆಗೆ ಬೇಡಿಕೆ ಇರಲಿಲ್ಲ. ಈಗ ಚೀನಾ ಆಮದು ಬಂದ್ ಆಗಿದೆ. ಸ್ಥಳೀಯ ರೇಷ್ಮೆಗೆ ಬೇಡಿಕೆ ಬಂದಿದೆ. ಪ್ರಸ್ತುತ ಉತ್ತಮ ದರ ಸಿಗುತ್ತಿದೆ. ರೇಷ್ಮೆ ಶ್ರೇಷ್ಠತೆ ಮತ್ತು ಗೌರವದ ಸಂಕೇತ. ಮೈಸೂರು ಸಿಲ್ಕ್‌ಗೆ ಅತ್ಯಂತ ಗೌರವವಿದೆ ಎಂದರು.
:ರಾಮನಗರದ ಮಾರುಕಟ್ಟೆಗೆ ರೇಷ್ಮೆ ಸಾಗಿಸುವ ವಾಹನಗಳನ್ನು ಪೊಲೀಸರು ತಡೆದು ನಿಲ್ಲಿಸುತ್ತಾರೆ ಎಂಬ ಆರೋಪವಿದೆ. ರೈತರಿಗೆ ದಾರಿ ಮಧ್ಯೆ ತೊಂದರೆ ಕೊಡದಂತೆ ಪೊಲೀಸರಿಗೆ ಸೂಚಿಸಲಾಗಿದೆ. ರೈತರಿಗೆ ವಿಐಪಿ ಪಾಸ್ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ರೇಷ್ಮೆ ಬೆಳೆಗಾರರು ಮಾರುಕಟ್ಟೆಗಾಗಿ ರಾಮನಗರಕ್ಕೆ ಹೋಗಬೇಕು. ಸ್ಥಳೀಯವಾಗಿ ಮಾರುಕಟ್ಟೆಯಾದರೆ ಅನುಕೂಲವಾಗಲಿದೆ ಎಂದು ಬೆಳೆಗಾರ ಮಂಜುನಾಥ, ರೇಷ್ಮೆ ಬೆಳೆಗೆ ಅಗತ್ಯವಾದ ಔಷಧಗಳು ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ರೇಷ್ಮೆ ಬೆಳೆಗಾರ ಅನಿಲ್ ಕುಮಾರ್ ಮನವಿ ಮಾಡಿದರು.
ರೇಷ್ಮೆ ಇಲಾಖೆ ಜಂಟಿ ನಿರ್ದೇಶಕ ಭೈರಪ್ಪ, ಕಾಚಿನಕಟ್ಟೆ ಗ್ರಾಮ ಪಂಚಾತಿಯಿ ಅಧ್ಯಕ್ಷೆ ಶ್ವೇತಾ ಮಹೇಶ್, ರೈತರಾದ ದಾಸಪ್ಪ, ನಾಗೇಶ್, ರೇಷ್ಮೆ ಉಪ ನಿರ್ದೇಶಕ ಮುರಳೀಧರ್, ವಿಜ್ಞಾನಿಗಳಾದ ತಿಮ್ಮಾರೆಡ್ಡಿ, ಡಾ.ರಾಧಾಕೃಷ್ಣ ಉಪಸ್ಥಿತರಿದ್ದರು.