ರೈತರಿಂದ ಹೆದ್ದಾರಿ, ರೈಲು ಮಾರ್ಗ ಬಂದ್; ದೆಹಲಿ,ಹರ್ಯಾಣ ಗಡಿಭಾಗದಲ್ಲಿ ಸಂಚಾರಕ್ಕೆ ಅಡ್ಡಿ
ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಕೇಂದ್ರಕ್ಕೆ ಸಂದೇಶ ನೀಡಲು ಭಾರತ್ ಬಂದ್ ಆಚರಿಸುತ್ತಿದ್ದೇವೆ ಎಂದು ಎಸ್ಎಂಕೆ ನಾಯಕ ಇಂದರ್ಜಿತ್ ಸಿಂಗ್ ಹೇಳಿದರು. “ನಾವು ಅಂಗಡಿಯವರು, ಸಣ್ಣ ಕಾರ್ಖಾನೆ ಮಾಲೀಕರಿಗೆ ಸಂಜೆ 4 ಗಂಟೆಯವರೆಗೆ ರೈತರಿಗೆ ಬೆಂಬಲವಾಗಿ ತಮ್ಮ ಸಂಸ್ಥೆಗಳನ್ನು ಮುಚ್ಚುವಂತೆ ಮನವಿ ಮಾಡಿದ್ದೇವೆ.
ದೆಹಲಿ: ಕೇಂದ್ರದ ಮುೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಸೋಮವಾರ ಸಂಯುಕ್ತ ಕಿಸಾನ್ ಮೋರ್ಚಾ (SKM) ಕರೆ ನೀಡಿದ್ದ 10 ಗಂಟೆಗಳ ಭಾರತ್ ಬಂದ್ನಲ್ಲಿ ಹೆದ್ದಾರಿಗಳು ಮತ್ತು ರೈಲು ಮಾರ್ಗಗಳನ್ನು ಬಂದ್ ಮಾಡಿದ್ದಾರೆ. ಹರ್ಯಾಣ ಮತ್ತು ದೆಹಲಿಯಲ್ಲಿ ಹೆಚ್ಚಿನ ಪೊಲೀಸ್ ತಂಡ ನಿಯೋಜನೆ ಆಗಿದೆ. ಭಾರತ್ ಬಂದ್ ಹಿನ್ನೆಲೆಯಲ್ಲಿ ದೆಹಲಿ ಮತ್ತು ಹರ್ಯಾಣದ ಪೊಲೀಸರು ಗಡಿ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ ಮತ್ತು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ಸಾಕಷ್ಟು ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಪೊಲೀಸ್ ಅಧಿಕಾರಿಗಳು ಗಸ್ತು ತೀವ್ರಗೊಳಿಸಿದ್ದಾರೆ. ಹೆಚ್ಚುವರಿ ಸಿಬ್ಬಂದಿಯನ್ನು ಪಿಕೆಟ್ಗಳಲ್ಲಿ ನಿಯೋಜಿಸಲಾಗಿದೆ, ವಿಶೇಷವಾಗಿ ಹಳ್ಳಿಗಳ ಮೂಲಕ ದೆಹಲಿಗೆ ಹೋಗುವ ಎಲ್ಲಾ ರಸ್ತೆಗಳಲ್ಲಿ, ಗಡಿ ಪ್ರದೇಶಗಳ ಬಳಿ ಮತ್ತು ರಾಷ್ಟ್ರ ರಾಜಧಾನಿಗೆ ಪ್ರವೇಶಿಸುವ ಪ್ರತಿಯೊಂದು ವಾಹನವನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತಿದೆ. ಭಾರತ್ ಬಂದ್ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಇಂಡಿಯಾ ಗೇಟ್ ಮತ್ತು ವಿಜಯ್ ಚೌಕ್ ಸೇರಿದಂತೆ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಸಾಕಷ್ಟು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಉಪ ಆಯುಕ್ತ (ನವದೆಹಲಿ) ದೀಪಕ್ ಯಾದವ್ ಹೇಳಿದರು.
ನಗರದ ಗಡಿಯಲ್ಲಿರುವ ಮೂರು ಪ್ರತಿಭಟನಾ ಸ್ಥಳಗಳಿಂದ ಯಾವುದೇ ಪ್ರತಿಭಟನಾಕಾರರಿಗೆ ದೆಹಲಿ ಪ್ರವೇಶಿಸಲು ಅವಕಾಶವಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ‘ಭದ್ರತೆಯು ಮುನ್ನೆಚ್ಚರಿಕೆಯಾಗಿದೆ ಮತ್ತು ನಾವು ಸಂಪೂರ್ಣ ಎಚ್ಚರವಾಗಿರುತ್ತೇವೆ. ದೆಹಲಿಯಲ್ಲಿ ಭಾರತ್ ಬಂದ್ಗೆ ಕರೆ ಇಲ್ಲ, ಆದರೆ ನಾವು ಬೆಳವಣಿಗೆಗಳನ್ನು ನೋಡುತ್ತಿದ್ದೇವೆ ಮತ್ತು ಸಾಕಷ್ಟು ಸಂಖ್ಯೆಯ ಸಿಬ್ಬಂದಿ ಇಲ್ಲಿ ನಿಯೋಜನೆ ಆಗಿದೆ ಎಂದು ಇನ್ನೊಬ್ಬ ಅಧಿಕಾರಿ ಹೇಳಿದರು.