ಹಾಸನ: ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa) ಕುಟುಂಬ ಸಮೇತರಾಗಿ ಆಗಮಿಸಿ ಹಾಸನಾಂಬೆ ದೇವಿಯ (hasanamba temple) ದರ್ಶನ ಪಡೆದರು. ಬಳಿಕ ಮಾತನಾಡಿದ ಅವರು, ಸಿಂಧಗಿ-ಹಾನಗಲ್ ಉಪ ಚುನಾವಣೆಯಲ್ಲಿ (by election) ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಚುನಾವಣಾ ಫಲಿತಾಂಶ ನವೆಂಬರ್ 2ರಂದು ಗೊತ್ತಾಗುತ್ತೆ. ಎರಡು ಪಕ್ಷದವರು ನಾವು ಮುಂದಿದ್ದೇವೆ ಅಂತಾರೆ, ನಿಜವಾಗಿಯೂ ನಾವು ಮುಂದಿದ್ದೇವೆ.

ಎರಡು ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ. ಮೂರು ಅಂಶಗಳ ಮೂಲಕ ಚುನಾವಣೆ ಮಾಡಿದ್ದೇವೆ. ಮೊದಲನೆಯದು ಬೂತ್ ಮಟ್ಟದಿಂದ ಕಾರ್ಯಕರ್ತರ ಸಂಘಟನೆ ಬಲವಾಗಿದೆ. ಎರಡನೆಯದು ಯಡಿಯೂರಪ್ಪ (yediyurappa) ಸಿಎಂ ಆಗಿದ್ದಾಗ ಮಾಡಿದ್ದ ಅಭಿವೃದ್ಧಿ ಕಾರ್ಯಗಳು, ಸಿಎಂ ಬಸವರಾಜ ಬೊಮ್ಮಯಿ (cm basavaraj bommai) ಮಾಡುತ್ತಿರುವ ಅಭಿವೃದ್ಧಿ ಕಾರ್ಯ. ಮೂರನೆಯದು ನಾಯಕತ್ವ ಎಂದರು.
ಉಗ್ರಪ್ಪ ಮೇಲೆ ಕ್ರಮ ಕೈಗೊಂಡಿಲ್ಲ ಏಕೆ?
ಕಾಂಗ್ರೆಸ್ನಲ್ಲಿ ನಾಯಕರು ಯಾರು ಅಂಥಾ ಕೇಳುವ ಸ್ಥಿತಿ ಎದುರಾಗಿದೆ, ಅವರಲ್ಲೇ ಗೊಂದಲಗಳಿವೆ. ಇಡೀ ವಿಶ್ವವೇ ಮೆಚ್ಚಿರುವ ಮೋದಿಯವರ ನಾಯಕತ್ವ. ಈ ಚುನಾವಣೆಯಲ್ಲಿ ನಮ್ಮ ಮೂರು ಅಂಶಗಳು ನಮಗೆ ಅನುಕೂಲವಾಗಿವೆ. ಕಾಂಗ್ರೆಸ್-ಜೆಡಿಎಸ್ ನಲ್ಲಿ ಗೊಂದಲಗಳಿವೆ. ಅದರಲ್ಲೂ ಕಾಂಗ್ರೆಸ್ ನಲ್ಲಿ ಎರಡು ಗುಂಪುಗಳಿವೆ. ಒಂದು ಡಿ.ಕೆ.ಶಿವಕುಮಾರ್ ಗುಂಪು, ಸಲೀಂ-ಉಗ್ರಪ್ಪ ಮಾತನಾಡಿರುವುದನ್ನು ನೋಡಿದ್ದೇವೆ. ಸಲೀಂ ಅವರ ಬಗ್ಗೆ ಮಾತ್ರ ಕ್ರಮ ಕೈಗೊಂಡಿದ್ದಾರೆ, ಉಗ್ರಪ್ಪ ಮೇಲೆ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.
ಗುಂಪುಗಾರಿಕೆ ಹೆಚ್ಚಾಗುತ್ತೆ ನೋಡ್ತಿರಿ..
ಕಾಂಗ್ರೆಸ್ನಲ್ಲಿ ಗುಂಪುಗಾರಿಕೆ ಚುನಾವಣೆ ಮುಗಿದ ಮೇಲೆ ಇನ್ನೂ ಜಾಸ್ತಿಯಾಗುತ್ತೆ. ಬರುವ ಚುನಾವಣೆ ವೇಳೆಗೆ ಕಾಂಗ್ರೆಸ್ ಗುಂಪುಗಾರಿಕೆ ಜಾಸ್ತಿಯಾಗುತ್ತೆ. ಸಿದ್ದರಾಮಯ್ಯ ನಾನೇ ಸಿಎಂ ಅಂತಾರೆ, ಪರಮೇಶ್ವರ್ ದಲಿತ ಸಿಎಂ ಆಗಬೇಕು ಅಂತಾರೆ. ಎಂ.ಬಿ.ಪಾಟೀಲ್, ತನ್ವೀರ್ ಸೇಠ್ ಅವರದ್ದೇ ಗುಂಪು, ಡಿ.ಕೆ.ಶಿವ ಕುಮಾರ್ ನಾನೇ ಸಿಎಂ ಅಂತಾರೆ. ಕೇಂದ್ರ ನಾಯಕರು ಬಹಿರಂಗವಾಗಿ ಮಾತನಾಡಬೇಡಿ ಅಂದಿದ್ದಕ್ಕೆ ಸುಮ್ಮನಾಗಿದ್ದಾರೆ ಎಂದು ಕುಹಕವಾಡಿದರು.