ಕ್ರೈಂ

ಮದ್ಯದ ಅಮಲಿನಲ್ಲಿ ಪುಂಡಾಟ: 5 ಎಂಜಿನಿಯರಿಂಗ್ ವಿದ್ಯಾರ್ಥಿಗಳ ಬಂಧನ

ಬೆಂಗಳೂರು: 2 ದಿನಗಳ ಹಿಂದೆ ಮದ್ಯದ ಅಮಲಿನಲ್ಲಿ ರಸ್ತೆ ಬಂದಿ ನಿಲ್ಲಿಸಿದ್ದ 14 ಕಾರುಗಳ ಗಾಜುಗಳನ್ನು ಒಡೆದು ಪುಂಡಾಟಿಕೆ ಮಾಡಿದ್ದ ಖಾಸಗಿ ಕಾಲೇಜಿನ ಐವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಾದ ಅದ್ನಾನ್ ಶಾಹೇಬ್, ರೋಹಿತ್ ಸೈನಿ, ಜೈಯಶ್, ಸಪ್ತಾನ್ ಭಾರದ್ವಾಜ್ ಹಾಗೂ ಮಯಾಂಕ್ ಬಂಧಿತರಾಗಿದ್ದು, ಆರೋಪಿಗಳಿಂದ ಕ್ರಿಕೆಟ್ ಬ್ಯಾಟ್ ಹಾಗೂ ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಎಱಡು ದಿನಗಳ ಹಿಂದೆ ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ ಸ್ನೇಹಿತನ ಹುಟ್ಟುಹಬ್ಬದ ಸಂಭ್ರಮದಲ್ಲಿ ಜಾಲಿರೈಡ್’ಗೆ ಬಂದಾಗ ಈ ವಿದ್ಯಾರ್ಥಿಗಳು ಪುಂಡಾಟಿಕೆ ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ವಿದ್ಯಾರ್ಥಿಗಳು ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಬಿಹಾರ ರಾಜ್ಯದವರಾಗಿದ್ದು, ಕೆಂಗೇರಿ ಸಮೀಪ ಕೋಡಿಪಾಳ್ಯದ ಅಪಾರ್ಟ್’ಮೆಂಟ್ ನಲ್ಲಿ ಮೂವರು ವಾಸವಾಗಿದ್ದರು. ಕಾಲೇಜಿನ ಹಾಸ್ಟೆಲ್ ನಲ್ಲಿ ಮತ್ತಿಬ್ಬರು ನೆಲೆಸಿದ್ದರು.

ಸೆ.23ರಂದು ತನ್ನ ಅಪಾರ್ಟ್ ಮೆಂಟ್ ಫ್ಲ್ಯಾಟ್ ನಲ್ಲಿ ಗೆಳೆಯರ ಜೊತೆ ರೋಹಿತ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಆ ವೇಳೆ ವಿದ್ಯಾರ್ಥಿಗಳು ಮದ್ಯ ಸೇವಿಸಿದ್ದರು. ನಂತರ ನಸುಕಿನಲ್ಲಿ ಎರಡು ಬೈಕ್ ಗಳಲ್ಲಿ ಐವರು ವಿದ್ಯಾರ್ಥಿಗಳು ಜಾಲಿರೈಡ್’ಗೆ ಬಂದಿದ್ದರು.

ಆಗ ಪೆಟ್ರೋಲ್ ಬಂಕ್ ನ ಕಾಳಿ ಮಳಿಗೆಯಲ್ಲಿ ತಂಪು ಮಾನೀಯ ಖರೀದಿಸಿದ್ದರು. ರಾಜರಾಜೇಶ್ವರಿನಗರದ ಕೃಷ್ಣ ಗಾರ್ಡನ್ ರಸ್ತೆ ಬದಿ ನಿಲ್ಲಿಸಿದ್ದ 6 ಕಾರುಗಳ ಗಾಜುಗಳಿಗೆ ಕ್ರಿಕೆಟ್ ಬ್ಯಾಟ್ ನಿಂದ ಒಡೆದು ಪುಂಡಾಟಿಕೆ ಮಾಡಿದ ಅವರು, ಅಲ್ಲಿಂದ ಕೇಕೆ ಹಾಕಿಕೊಂಡು ಕೂಗಾಡುತ್ತ ಕೆಂಗೇರಿಯ ನಂಜಪ್ಪ ಬ್ಲಾಕ್ ರಸ್ತೆಗೆ ಬಂದಿದ್ದಾರೆ. ಅಲ್ಲಿಯೂ ಕೂಡ 8 ಕಾರುಗಳ ಗಾಜುಗಳನ್ನು ಕ್ರಿಕೆಟ್ ಬ್ಯಾಟ್ ನಿಂದ ಹಾನಿ ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ಬಳಿಕ ಕಾರುಗಳ ಮಾಲೀಕರು ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದು, ಈ ವೇಳೆ ವಿದ್ಯಾರ್ಥಿಗಳ ಬೈಕ್ ನೋಂದಣಿ ಸಂಖ್ಯೆ ದೊರೆತಿದೆ. ಬಳಿಕ ಕಾರ್ಯಾಚರಣೆ ನಡೆಸಿ ಐವರು ವಿದ್ಯಾರ್ಥಿಗಳನ್ನು ಬಂಧನಕ್ಕೊಳಪಡಿಸಿ ನಶೆ ಇಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button