ಇತ್ತೀಚಿನ ಸುದ್ದಿ

ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ- ಕವಲಂದೆ ಪೊಲೀಸರಿಂದ ಜಾಗೃತಿ ಜಾಥಾ

ನಂಜನಗೂಡು: ವಾಹನ ಚಲಾಯಿಸುವವರು ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ತಮ್ಮ ಜೀವ ಉಳಿಸಿಕೊಳ್ಳುವ ಜೊತೆಗೆ ಜೀವ ರಕ್ಷಣೆ ಮಾಡಬೇಕು ಎಂದು ಕವಲಂದೆ ಪೊಲೀಸ್ ಠಾಣೆಯ ಪಿಎಸ್ಐ ಬಿ.ಬಸವರಾಜು ಹೇಳಿದರು.

ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ, ದೇವನೂರು, ತಗಡೂರು, ಚಿಕ್ಕ ಕವಲಂದೆ ಗ್ರಾಮಗಳಲ್ಲಿ ಮೈಸೂರು ಜಿಲ್ಲಾ ಪೊಲೀಸ್ ಮತ್ತು ಕವಲಂದೆ ಪೊಲೀಸ್ ಠಾಣಾ ವತಿಯಿಂದ ಸಂಚಾರ ನಿಯಮ ಅರಿವು ಕಾರ್ಯಕ್ರಮದಲ್ಲಿ ಕವಲಂದೆ ಪೊಲೀಸ್ ಠಾಣೆಯ ಪಿಎಸ್ಐ ಬಿ.ಬಸವರಾಜು ನೇತೃತ್ವದಲ್ಲಿ ಪೊಲೀಸರು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.

ಬಳಿಕ ಪಿಎಸ್ಐ ಬಿ.ಬಸವರಾಜು ಮಾತನಾಡಿ, ರಸ್ತೆಯಲ್ಲಿ ನಿಂತು ತಪ್ಪು ಮಾಡುವ ವಾಹನ ಚಾಲಕರಿಗೆ ಒಮ್ಮೆಲೆ ದಂಡ ಹಾಕುವ ಬದಲು, ಮೊದಲು ರಸ್ತೆ ಸುರಕ್ಷತೆ ಬಗ್ಗೆ, ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ನಂತರವೂ ತಪ್ಪು ಮಾಡುವುದು ಮುಂದುವರಿದಲ್ಲಿ, ನಿಯಮಗಳನ್ನು ಉಲ್ಲಂಘಿಸಿದಲ್ಲಿ ದಂಡ ಹಾಕುವುದು ಖಚಿತ ಎಂದು ಅವರು ಎಚ್ಚರಿಸಿದರು.

ಮನೆಗೆ ಸಮೀಪದಲ್ಲಿರುವ ಅಂಗಡಿಗೆ ಹೋಗಿದ್ದೆ. ಅದಕ್ಕಾಗಿ ಹೆಲ್ಮೆಟ್ ಧರಿಸಿರಲಿಲ್ಲ. ಕೂಗಳತೆ ದೂರದಲ್ಲಿನ ತೋಟಕ್ಕೆ ಹೋಗಿದ್ದೆ. ಅಷ್ಟು ಹತ್ತಿರಕ್ಕೆಲ್ಲ ಹೆಲ್ಮೆಟ್ ಹಾಕಬೇಕೆ?’ ಎಂಬಿತ್ಯಾದಿ ಸಬೂಬು ಹೇಳಬಾರದು. ವಾಹನ ಏರಿದಾಕ್ಷಣ ನಿಯಮಗಳು ಅನ್ವಯವಾಗುತ್ತವೆ. ಹೆಲ್ಮೆಟ್ ಧರಿಸದೇ ಇರುವುದು ಕಾನೂನು ಉಲ್ಲಂಘನೆಯಾಗುತ್ತದೆ. ಅಜಾಗರೂಕತೆಗೆ ಅವಕಾಶ ನೀಡದೆ ರಸ್ತೆ ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಿ ಎಂದು ತಾಕೀತು ಮಾಡಿದರು. ಪ್ರತಿ ಹೆಜ್ಜೆ ಹೆಜ್ಜೆಯಲ್ಲೂ ರಸ್ತೆ ಸುರಕ್ಷತಾ ನಿಯಮಗಳನ್ನು ಸಾರ್ವಜನಿಕರು ಪಾಲಿಸಬೇಕು. ಪ್ರತಿಯೊಬ್ಬರಿಗೂ ತಮ್ಮ ಜೀವ ಅಮೂಲ್ಯವಾಗಿದ್ದು ಅದರ ರಕ್ಷಣೆ ತುಂಬಾ ಅಗತ್ಯವಾಗಿದೆ. ನಿರ್ಲಕ್ಷ್ಯವಹಿಸಿ ವಾಹನ ಚಲಾಯಿಸುವುದು, ಸಂಚಾರಿ ನಿಯಮಗಳನ್ನು ಪಾಲಿಸದಿರುವುದರಿಂದ ಅನೇಕ ಅಪಘಾತಗಳು ಸಂಭವಿಸಿ ಪ್ರಾಣ ಕಳೆದುಕೊಳ್ಳುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಆದ್ದರಿಂದ ಎಲ್ಲರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸುವುದು ಅವಶ್ಯಕವಾಗಿದೆ.

ವಾಹನ ಚಲಾಯಿಸುವಾಗ ಮದ್ಯಪಾನ. ಧೂಮಪಾನ, ಮೊಬೈಲ್‍ನಲ್ಲಿ ಮಾತನಾಡುವುದು ಅಪಾಯವಾಗಿದೆ. ವಾಹನ ಚಲಾಯಿಸುವವರು ಲೈಸನ್ಸ್ ಸೇರಿದಂತೆ ಎಲ್ಲಾ ದಾಖಲಾತಿಯನ್ನು ಹೊಂದಿರಬೇಕು. ಅತಿ ವೇಗದಿಂದ ಚಲಿಸುವುದು ಬೇಡ. ದ್ವಿಚಕ್ರದ ಮೇಲೆ ಇಬ್ಬರು ಮಾತ್ರ ಸವಾರಿ ಮಾಡಬೇಕು.

ಹೆಲ್ಮೆಟ್ ಧರಿಸುವುದು, ರಸ್ತೆ ಎಡಬದಿಯಿಂದ ಚಲಿಸುವುದು, ರಸ್ತೆ ದಾಟುವಾಗ ಎರಡು ಕಡೆಯಿಂದ ವಾಹನಗಳನ್ನು ಗಮನಿಸಿ ಚಲಿಸಬೇಕು ಎಂದರು. ನಮ್ಮ ದೇಶದಲ್ಲಿ ಪ್ರತಿ ನಾಲ್ಕು ನಿಮಿಷಗಳಿಗೆ ಒಬ್ಬರು, ವರ್ಷಕ್ಕೆ ಸುಮಾರು 1.5 ಲಕ್ಷ ಜನರು ನಿರ್ಲಕ್ಷತನದಿಂದ ವಾಹನ ಚಲಾಯಿಸಿ ಅಪಘಾತವಾಗಿ ಸಾವನ್ನಪ್ಪುತ್ತಿದ್ದಾರೆ. ಸ್ವತಃ ವಾಹನ ಸವಾರರು ಸಾವನ್ನಪ್ಪುವುದಲ್ಲದೆ, ಮತ್ತೊಬ್ಬರ ಪ್ರಾಣಕ್ಕೆ ಕೂಡಾ ತೊಂದರೆ ಮಾಡುತ್ತಾರೆ. ನಾಗರಿಕರು ತಮಗೆ ಪೊಲೀಸ್ ಸಹಾಯ ಬೇಕಾದರೆ 112 ಸಂಖ್ಯೆಗೆ ಕರೆ ಮಾಡಬೇಕು. ರಸ್ತೆ ಸಂಚಾರ ನಿಯಮಗಳ ಬಗ್ಗೆ ಎಲ್ಲೆಡೆ ವ್ಯಾಪಕವಾದ ಜನಜಾಗೃತಿ ಅಗತ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಎಸ್.ಬಿ ರಮೇಶ್, ಎಎಸ್ಐಗಳಾದ ಲಿಂಗದೇವರು, ಬಸವರಾಜು, ನಿಂಗೇಗೌಡರು, ಧಫೇದರ್‌ ಚಂದ್ರು , ಸುರೇಶ್, ಮಹೇಶ್ , ರಾಜಶೇಖರ್, ಗಣೇಶ್, ಮಂಜು, ರವಿ, ರಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button