ಡಿಜಿಟಲ್ ಆರೋಗ್ಯ ಮಿಷನ್‌ಗೆ ಪ್ರಧಾನಿ ಮೋದಿ ಇಂದು ಚಾಲನೆ:
ನವದೆಹಲಿ, ಸೆಪ್ಟೆಂಬರ್ 27: ಪ್ರಧಾನಿ ನರೇಂದ್ರ ಮೋದಿ ಸೋಮವಾರದಂದು ಡಿಜಿಟಲ್ ಆರೋಗ್ಯ ಮಿಷನ್‌ಗೆ ಚಾಲನೆ ನೀಡಲಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಡಿಜಿಟಲ್ ಆರೋಗ್ಯ ಮಿಷನ್ ಲೋಕಾರ್ಪಣೆಗೊಳ್ಳಲಿದ್ದು, ಈ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ.
2020ರ ಆಗಸ್ಟ್ 15ರಂದು ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯೋತ್ಸವ ಭಾಷಣ ಮಾಡುವಾಗ ರಾಪ್ಟ್ರೀಯ ಡಿಜಿಟಲ್ ಆರೋಗ್ಯ ಯೋಜನೆಯನ್ನು ಪ್ರಧಾನಿ ಪ್ರಕಟ ಮಾಡಿದ್ದರು. ಇಂದು ಆರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ.
ಪ್ರತಿಯೊಬ್ಬ ಭಾರತದ ಪ್ರಜೆಗೂ ಈ ಯೋಜನೆಯ ಅಡಿಯಲ್ಲಿ ಆರೋಗ್ಯ ಗುರುತಿನ ಚೀಟಿಯನ್ನು ನೀಡಲಾಗುವುದು. ಇದು ಜಾರಿಗೆ ಬರುವುದರಿಂದ ಪ್ರತಿಯೊಬ್ಬ ನಾಗರಿಕನೂ ಕೂಡಾ ಆರೋಗ್ಯದ ಕುರಿತಾದ ದಾಖಲೆಗಳು, ವೈದ್ಯರು ಮತ್ತು ಆರೋಗ್ಯ ಸೇವೆಗಳ ಕುರಿತಾಗಿ ಡಿಜಿಟಲ್ ರೂಪದಲ್ಲಿ ಮಾಹಿತಿಯನ್ನು ಪಡೆಯಬಹುದು.
ಪ್ರಧಾನಮಂತ್ರಿ ಡಿಜಿಟಲ್ ಹೆಲ್ತ್ ಯೋಜನೆಯನ್ನು ಸೋಮವಾರ ರಾಷ್ಟ್ರವ್ಯಾಪಿ ಬಿಡುಗಡೆ ಮಾಡುವುದಾಗಿ ಪ್ರಧಾನಿ ಮೋದಿ ಘೋಷಿಸಲಿದ್ದಾರೆ. ಈ ಯೋಜನೆಯ ಅಡಿಯಲ್ಲಿ ದೇಶದ ಜನರಿಗೆ ಡಿಜಿಟಲ್ ಹೆಲ್ತ್ ನೋಂದಣಿ ಸಂಖ್ಯೆ ನೀಡಲಾಗುತ್ತದೆ. ಇದು ಪ್ರತಿಯೊಬ್ಬನ ಎಲ್ಲಾ ಆರೋಗ್ಯ ದಾಖಲೆಗಳನ್ನು ಒಳಗೊಂಡಿರುತ್ತದೆ.
ಜನ ಧನ್, ಆಧಾರ್, ಮೊಬೈಲ್ ಮತ್ತು ಸರ್ಕಾರದ ಇನ್ನಿತರ ಡಿಜಿಟಲ್ ಉಪಕ್ರಮಗಳ ಅಧಾರದ ಮೇಲೆ ಡಿಜಿಟಲ್ ಆರೋಗ್ಯ ಮಿಷನ್ ವ್ಯಾಪಕ ಶ್ರೇಣಿಯ ದತ್ತಾಂಶ ಮತ್ತು ಮಾಹಿತಿಯನ್ನು ಒದಗಿಸುವ ಮೂಲಕ ತಡೆರಹಿತ ಆನ್‌ಲೈನ್ ವೇದಿಕೆಯನ್ನು ಒದಗಿಸಲಿದೆ. ಇದರ ಜತೆಗೆ ಮೂಲಸೌಕರ್ಯ ಸೇವೆಗಳು, ಆರೋಗ್ಯಕ್ಕೆ ಸಂಬಂಧಿಸಿದ ವೈಯಕ್ತಿಕ ಮಾಹಿತಿಯ ಸುರಕ್ಷತೆ, ಗೌಪ್ಯತೆ ಮತ್ತು ಗೌಪ್ಯತೆಯನ್ನು ಖಾತ್ರಿಪಡಿಸಿಕೊಳ್ಳುವ ಮೂಲಕ ಮುಕ್ತವಾಗಿ, ಪರಸ್ಪರ ಕಾರ್ಯ ನಿರ್ವಹಿಸುವ, ಮಾನದಂಡ ಆಧಾರಿತ ಡಿಜಿಟಲ್ ವ್ಯವಸ್ಥೆಯನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಲಿದೆ. ಜತೆಗೆ ಈ ಡಿಜಿಟಲ್ ಆರೋಗ್ಯ ಮಿಷನ್ ನಾಗರಿಕ ಒಪ್ಪಿಗೆಯೊಂದಿಗೆ ಆರೋಗ್ಯದ ದಾಖಲೆಗಳನ್ನು ಪಡೆಯಲು ಸಕ್ರಿಯಗೊಳಿಸಲಾಗುತ್ತದೆ.